×
Ad

4 ಮಹಾ ನಗರ ಪಾಲಿಕೆಯಲ್ಲಿ ಸ್ಮಾರ್ಟ್‍ಸಿಟಿ ಯೋಜನೆ: ಶೀಘ್ರದಲ್ಲೆ ಕೇಂದ್ರ ಸಚಿವರ ಭೇಟಿ- ಭೈರತಿ ಬಸವರಾಜು

Update: 2020-06-24 16:53 IST

ಕಲಬುರಗಿ, ಜೂ. 24: ಕಲಬುರಗಿ ಸೇರಿದಂತೆ ಇನ್ನೂ ನಾಲ್ಕು ಮಹಾ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸ್ಮಾರ್ಟ್‍ಸಿಟಿ ಯೋಜನೆ ಅನುಷ್ಠಾನಗೊಳಿಸುವ ಸಂಬಂಧ ಶೀಘ್ರದಲ್ಲೆ ಕೇಂದ್ರ ಸಚಿವರನ್ನು ಭೇಟಿ ಮಾಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ನೈರ್ಮಲ್ಯ, ಕುಡಿಯುವ ನೀರು ಪೂರೈಕೆ, ಕೊಳಚೆ ನೀರು ಸಂಸ್ಕರಣೆ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಹೊಸದಿಲ್ಲಿ ಪ್ರವಾಸ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಶೀಘ್ರದಲ್ಲೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಾಗುವುದು ಎಂದರು.

ಕೆರೆಗಳ ಭರ್ತಿ: ನಗರದಲ್ಲಿನ ತ್ಯಾಜ್ಯ ನೀರು ಸಂಸ್ಕರಣೆ ಮಾಡಿ ಆ ನೀರನ್ನು ಉದ್ಯಾನವನ ಹಾಗೂ ಕೆರೆಗಳನ್ನು ಭರ್ತಿ ಮಾಡಲು ಬಳಕೆ ಮಾಡಿಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಸಂಸ್ಕರಿಸಿದ ತ್ಯಾಜ್ಯ ನೀರನ್ನು ವ್ಯರ್ಥ ಮಾಡುವುದು ಸಲ್ಲ. ಕೋಟ್ಯಂತರ ರೂ.ವೆಚ್ಚ ಮಾಡಿ ಶುದ್ಧೀಕರಿಸಿದ ನೀರನ್ನು ಮರಳಿ ಭೀಮಾ ನದಿಗೆ ಬಿಡುವುದು ಒಳ್ಳೆಯದಲ್ಲ ಎಂದರು.

ಸಂಸ್ಕರಿಸಿದ ನೀರನ್ನು ಕೆರೆಗಳನ್ನು ತುಂಬಿಸುವುದರಿಂದ ಅಂತರ್ಜಲ ವೃದ್ಧಿಯಾಗಲಿದೆ. ಜೊತೆಗೆ ಉದ್ಯಾನವನಗಳ ನಿರ್ವಹಣೆಗೂ ಅನುಕೂಲವಾಗಲಿದೆ ಎಂದ ಅವರು, ತ್ಯಾಜ್ಯ ನೀರು ಸಂಸ್ಕರಿಸಿ ವ್ಯರ್ಥ ಮಾಡುವುದಕ್ಕೆ ನಗರದ ಸಾರ್ವಜನಿಕರು ಆಕ್ಷೇಪಿಸಿದ್ದಾರೆ. ಹೀಗಾಗಿ ಸರಕಾರ ತ್ಯಾಜ್ಯ ನೀರು ಮರು ಬಳಕೆಗೆ ಕ್ರಮ ವಹಿಸಲಿದೆ ಎಂದು ಬಸವರಾಜು ತಿಳಿಸಿದರು.

ನಗರದ ರಸ್ತೆಗಳು ಹದಗೆಟ್ಟಿದ್ದು ಆಳಂದ ಹೊರವರ್ತುಲ ರಸ್ತೆ, ತಾಜ ಸುಲ್ತಾನಪುರ ರಸ್ತೆ ಸೇರಿದಂತೆ ದುಸ್ಥಿತಿಯಲ್ಲಿರುವ ರಸ್ತೆಗಳ ಅಭಿವೃದ್ಧಿಗೆ 150 ಕೋಟಿ ರೂ.ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ. ಶೀಘ್ರದಲ್ಲೆ ಮೇಲ್ಕಂಡ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ನೇಮಕ ಮಾಡುವ ಬಗ್ಗೆ ಯಾವುದೇ ಪ್ರಸ್ತಾವ ಬಂದಿಲ್ಲ. ಶಾಸಕರು ಹೆಸರನ್ನು ಅಂತಿಮಗೊಳಿಸಿ ಕಳುಹಿಸಿದರೆ, ನಾಳೆಯೇ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದು ಬೈರತಿ ಬಸವರಾಜು ಪ್ರತಿಕ್ರಿಯೆ ನೀಡಿದರು. ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News