ಇದುವರೆಗೆ ರಾಜ್ಯದ 170 ಪೊಲೀಸರಿಗೆ ಕೊರೋನ ಸೋಂಕು
ಬೆಂಗಳೂರು, ಜೂ.24: ಕೋವಿಡ್-19 ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಇದುವರೆಗೆ ರಾಜ್ಯದಲ್ಲಿ 170 ಪೊಲೀಸರಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಸೋಂಕಿತರು ಬೆಂಗಳೂರಿನ ವಿಕ್ಟೋರಿಯಾ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಾಹಾಮಾರಿ ಕೊರೋನಗೆ ತುತ್ತಾದ ಪೊಲೀಸರಲ್ಲಿ ರಾಜಧಾನಿ ಬೆಂಗಳೂರು ಮುಂಚೂಣಿಯಲ್ಲಿದ್ದು, ಇಲ್ಲಿ ಒಟ್ಟು 77 ಜನ ಪೊಲೀಸರಲ್ಲಿ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ. 77 ಪಾಸಿಟಿವ್ ಪ್ರಕರಣಗಳ ಪೈಕಿ 7 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, ಮೂವರು ಮೃತಪಟ್ಟಿದ್ದಾರೆ. ಸದ್ಯ 67 ಸಕ್ರಿಯ ಪ್ರಕರಣಗಳು ಇವೆ.
ಉಳಿದಂತೆ ಮೈಸೂರು ಸೇರಿ ರಾಜ್ಯಾದ್ಯಂತ 93 ಪಾಸಿಟಿವ್ ಕೇಸ್‍ಗಳು ವರದಿಯಾಗಿವೆ. 93 ಪಾಸಿಟಿವ್ ಪ್ರಕರಣಗಳಲ್ಲಿ 34 ಸಕ್ರಿಯ ಪ್ರಕರಣಗಳಾಗಿದ್ದು, 59 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಸೋಂಕಿತ ಪೊಲೀಸರಲ್ಲಿ ಕೆಎಸ್‍ಆರ್‍ಪಿ ಮತ್ತು ಕಾನೂನು ಸುವ್ಯವಸ್ಥೆ ಪೊಲೀಸರೇ ಅಧಿಕವಾಗಿದ್ದು, ಉಳಿದಂತೆ ಸಂಚಾರ ಹಾಗೂ ಸಿಸಿಬಿ ಕಚೇರಿ ಸೇರಿ ಬೇರೆ ಕಡೆ ಕೆಲಸ ಮಾಡಿದ ಕೆಲವು ಮಂದಿಗೆ ಸೋಂಕು ತಗಲಿದೆ ಎಂದು ತಿಳಿದುಬಂದಿದೆ.