ನಾಳೆಯಿಂದ ಎಸೆಸೆಲ್ಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಸಿಎಂ ಬಿಎಸ್‌ವೈ, ಸಿದ್ದರಾಮಯ್ಯ, ಹೆಚ್‌ಡಿಕೆ ಶುಭ ಹಾರೈಕೆ

Update: 2020-06-24 13:02 GMT

ಬೆಂಗಳೂರು, ಜೂ.24: ಕೋವಿಡ್-19 ಮುಂಜಾಗ್ರತಾ ಕ್ರಮಗಳ ನಡುವೆ ರಾಜ್ಯಾದ್ಯಂತ ಜೂ.25ರಿಂದ ಎಸೆಸೆಲ್ಸಿ ಪರೀಕ್ಷೆ ಪ್ರಾರಂಭಗೊಳ್ಳುತ್ತಿದ್ದು, ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಶುಭಕೋರಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನಾಳೆಯಿಂದ ರಾಜ್ಯಾದ್ಯಂತ ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೂ ಶುಭ ಹಾರೈಕೆಗಳು. ಕೊರೊನ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಕಾರಣದಿಂದ ಮುಂದೂಡಲಾಗಿದ್ದ ಪರೀಕ್ಷೆ ಸುಸೂತ್ರವಾಗಿ ನಡೆಯಲು ಸರ್ಕಾರ ಎಲ್ಲ ಅಗತ್ಯ ಸಿದ್ಧತೆಗಳನ್ನೂ ಮಾಡಿದೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳೇ, ಮಾಸ್ಕ್, ಸ್ಯಾನಿಟೈಸರ್ ಗಳನ್ನು ಕಡ್ಡಾಯವಾಗಿ ಬಳಸಿ, ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ. ಸರ್ಕಾರ ಪರೀಕ್ಷೆ ನಡೆಸಲು ಹೊರಡಿಸಿರುವ ಮಾರ್ಗಸೂಚಿ ಗಳನ್ನು ಪಾಲಿಸಿ. ಶೈಕ್ಷಣಿಕ ಜೀವನದ ಮಹತ್ವದ ಘಟ್ಟವಾದ ಪರೀಕ್ಷೆಯನ್ನು ಆತಂಕ & ಭಯವಿಲ್ಲದೆ ಆತ್ಮವಿಶ್ವಾಸದಿಂದ ಎದುರಿಸಿ, ಯಶಸ್ಸು ಪಡೆಯಿರಿ. ಉಜ್ವಲ ಭವಿಷ್ಯ ನಿಮ್ಮದಾಗಲಿ ಎಂದು ಶುಭ ಹಾರೈಸಿದ್ದಾರೆ.

ಸಿದ್ದರಾಮಯ್ಯ

ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗುವ ಪ್ರೀತಿಯ ವಿದ್ಯಾರ್ಥಿಗಳಿಗೆ ಶುಭಾಶಯಗಳು. ಒತ್ತಡಕ್ಕೆ ಒಳಗಾಗಬೇಡಿ. ನೆನಪಿರಲಿ ಇದು ಶಾಲೆಯ ಪರೀಕ್ಷೆ, ಜೀವನದ ಪರೀಕ್ಷೆ ಅಲ್ಲ. ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿ, ಯಶಸ್ಸು ನಿಮ್ಮದಾಗಲಿ. ಗುಡ್ ಲಕ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಶುಭಕೋರಿದ್ದಾರೆ.

ಎಸೆಸೆಲ್ಸಿ ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ಆತಂಕಕ್ಕೆ ಒಳಗಾಗದೆ ನಿಶ್ಚಿಂತೆಯಿಂದ ಪರೀಕ್ಷೆ ಬರೆಯುವಂತಹ ವಾತಾವರಣ ನಿರ್ಮಿಸುವುದು ಸಿಎಂ ಯಡಿಯೂರಪ್ಪ ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಜವಾಬ್ದಾರಿ. ಮಕ್ಕಳ ಹೆತ್ತವರು ರಾಜ್ಯ ಸರ್ಕಾರದ ಮೇಲೆ ಇಟ್ಟಿರುವ ನಂಬಿಕೆಗೆ ಭಂಗ ತರಬೇಡಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕುಮಾರಸ್ವಾಮಿ

ಕೊರೋನ ಹರಡುವಿಕೆಯ ಬಗ್ಗ ಎಲ್ಲಾ ವಿದ್ಯಾರ್ಥಿಗಳು ಜಾಗೃತೆ ವಹಿಸಬೇಕು. ಸುರಕ್ಷತಾ ಕ್ರಮದ ಬಗ್ಗೆ ಸರಕಾರ ಹೇಳುವುದು ಮಾತ್ರವಲ್ಲ, ಅದನ್ನು ಕಾರ್ಯರೂಪಕ್ಕೆ ತಂದು ಮುಂಜಾಗೃತಾ ಕ್ರಮಕೈಗೊಳ್ಳಬೇಕು. ವಿದ್ಯಾರ್ಥಿಗಳು ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಿ, ಪರೀಕ್ಷೆ ಬರೆಯಿರಿ ಎಂದು ವಿಡಿಯೋ ಟ್ವೀಟ್ ಮಾಡಿ ಮಾಜಿ ಸಿಎಂ ಕುಮಾರಸ್ವಾಮಿ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News