ಕೊರೋನ ಸೋಂಕು ಹೆಚ್ಚಾದರೆ ಜಿಂದಾಲ್ ಲಾಕ್‍ಡೌನ್: ಸಚಿವ ಆನಂದ್ ಸಿಂಗ್
ಬಳ್ಳಾರಿ, ಜೂ.24: ಬಳ್ಳಾರಿ ಜಿಲ್ಲೆಯ ಜಿಂದಾಲ್ ನಲ್ಲಿ 296 ಕೊರೋನ ಸೋಂಕು ದೃಢಪಟ್ಟಿದ್ದು, 1,285 ಜನರು ಪ್ರಾಥಮಿಕ ಸಂಪರ್ಕದಲ್ಲಿದ್ದಾರೆ. ಹಾಗೊಂದು ಬಾರಿ ಜಿಂದಾಲ್‍ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದರೆ ಇಡೀ ಘಟಕವನ್ನು ಲಾಕ್‍ಡೌನ್ ಮಾಡಲಾಗುವುದು ಎಂದು ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಬಳ್ಳಾರಿ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಂದಾಲ್‍ನಲ್ಲಿ ಶೇ.15ರಷ್ಟು ಸೋಂಕು ಹರಡುತ್ತಿದ್ದು, ಆ ಘಟಕದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಜಿಂದಾಲ್‍ನಲ್ಲಿ ಹರಡುತ್ತಿರುವ ಕೊರೋನ ಸೋಂಕಿಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರೊಂದಿಗಿನ ಸಭೆಯಲ್ಲೂ ಚರ್ಚಿಸಲಾಗಿದೆ. ಅವರೂ ಸಾಧ್ಯವಾದಷ್ಟು ನೌಕರರು ಸುರಕ್ಷಿತ ಅಂತರ ಕಾಯ್ದುಕೊಂಡು ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ಭಾರತ ಸರಕಾರದ ಗೈಡ್‍ಲೈನ್ಸ್ ಪ್ರಕಾರ ಜಿಂದಾಲ್ ಲಾಕ್‍ಡೌನ್ ಕಷ್ಟ. ಒಂದು ವೇಳೆ ಸರಕಾರ ಮತ್ತು ಆರೋಗ್ಯ ಇಲಾಖೆಯ ನಿಯಮಗಳು ಪಾಲನೆ ಮಾಡಿಲ್ಲ, ಅಂದರೆ ಖಂಡಿತ ಕ್ರಮ ಕೈಗೊಳ್ಳಬೇಕಾಗುತ್ತದೆ. ಜಿಂದಾಲ್‍ನಲ್ಲಿ ಸಂಪರ್ಕ ಹೆಚ್ಚಾಗದಂತೆ ನೋಡಿಕೊಳ್ಳಲು ಅವರಿಗೂ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ವೈ.ದೇವೇಂದ್ರಪ್ಪ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ನಿತೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಉಪಸ್ಥಿತರಿದ್ದರು.