ಎಸೆಸೆಲ್ಸಿ ಪರೀಕ್ಷೆ ನಡೆಸಲು ಸರಕಾರ ಸನ್ನದ್ಧ: ಶಿಕ್ಷಣ ಸಚಿವ ಸುರೇಶ್‍ ಕುಮಾರ್

Update: 2020-06-24 17:31 GMT

ಬೆಂಗಳೂರು, ಜೂ.24: ನಾಳೆ(ಜೂ.25)ಯಿಂದ ಆರಂಭವಾಗಲಿರುವ ಎಸೆಸೆಲ್ಸಿ ಪರೀಕ್ಷೆಗಳ ಕೇಂದ್ರಗಳು ಕೇವಲ ಪರೀಕ್ಷಾ ಕೇಂದ್ರಗಳಲ್ಲ, ಅವು ಸಂಪೂರ್ಣ ಸುರಕ್ಷಿತಾ ಕೇಂದ್ರಗಳಾಗಿದ್ದು ಯಾವುದೇ ಪೋಷಕರು ಆತಂಕಕ್ಕೊಳಗಾಗದೇ ತಮ್ಮ ಮಕ್ಕಳನ್ನು ಧೈರ್ಯವಾಗಿ ಪರೀಕ್ಷೆಗೆ ಕಳುಹಿಸಿಕೊಡಬೇಕೆಂದು ಶಿಕ್ಷಣ ಸಚಿವ ಎಸ್.ಸುರೇಶ್‍ ಕುಮಾರ್ ಮನವಿ ಮಾಡಿದ್ದಾರೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಚಿವ ಸುರೇಶ್‍ ಕುಮಾರ್, ರಾಜ್ಯಾದ್ಯಂತ ಇರುವ 2,879 ಪರೀಕ್ಷಾ ಕೇಂದ್ರಗಳಲ್ಲಿ 8,48,203 ವಿದ್ಯಾರ್ಥಿಗಳು ನಾಳೆಯಿಂದ ಪರೀಕ್ಷೆಗಳನ್ನು ಬರೆಯಲಿದ್ದು, ಸರಕಾರವು ಸುಗಮ ಪರೀಕ್ಷಾ ನಿರ್ವಹಣೆಗೆ ಎಲ್ಲ ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದೆ ಎಂದರು.

ಪರೀಕ್ಷಾ ಕೇಂದ್ರ ಸ್ಥಳಾಂತರ: ಕಂಟೈನ್‍ಮೆಂಟ್‍ ಝೋನ್ ಎಂದು ಪರಿಗಣಿಸಲಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಾಂತ 11 ಜಿಲ್ಲೆಗಳ 27 ಪರೀಕ್ಷಾ ಕೇಂದ್ರಗಳನ್ನು ಸುರಕ್ಷಿತ ವಲಯಗಳಿಗೆ ಸ್ಥಳಾಂತರಿಸಲಾಗಿದ್ದು, ಈ ಕೇಂದ್ರಗಳಲ್ಲಿನ 7,490 ವಿದ್ಯಾರ್ಥಿಗಳು ಸ್ಥಳಾಂತರಿಸಿದ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲ್ಲಿದ್ದಾರೆ ಎಂಬ ಮಾಹಿತಿಯನ್ನು ಸಚಿವ ಸುರೇಶ್‍ ಕುಮಾರ್ ನೀಡಿದರು. ರಾಜ್ಯಾದ್ಯಾಂತ 10 ವಿದ್ಯಾರ್ಥಿಗಳು ಈ ದಿನದ ಅಂತ್ಯಕ್ಕೆ ಕೋವಿಡ್-19 ಸೋಂಕಿತರೆಂದು ಆರೋಗ್ಯ ಇಲಾಖೆಯು ಮಾಹಿತಿಯನ್ನು ನೀಡಿದ್ದು, ಗೃಹ ಕ್ವಾರೆಂಟೈನ್‍ನಲ್ಲಿರುವ 09 ವಿದ್ಯಾರ್ಥಿಗಳು ಸೇರಿದಂತೆ 19 ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗಳಲ್ಲಿ ಅವಕಾಶವನ್ನು ಕಲ್ಪಿಸಲಾಗುವುದುದೆಂದು ಸಚಿವ ಸುರೇಶ್‍ ಕುಮಾರ್ ಹೇಳಿದರು. 

ಪರೀಕ್ಷೆ ನಡೆಸುವುದು ಸರಕಾರದ ಕರ್ತವ್ಯ: ಎಸೆಸೆಲ್ಸಿ ಪರೀಕ್ಷೆಗಳನ್ನು ನಡೆಸುವುದು ಸರಕಾರಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿಲ್ಲ. ಶಿಕ್ಷಣ ಕ್ಷೇತ್ರದ ಪ್ರಮುಖರು ಸೇರಿ ಹಲವಾರು ಜನರ ಜೊತೆ ಸಂವಾದ ಚರ್ಚೆ ನಡೆಸಿದ ಬಳಿಕ ಪರೀಕ್ಷೆ ನಡೆಸಲು ತೀರ್ಮಾನ ಮಾಡಲಾಗಿದೆ. ಪರೀಕ್ಷೆ ನಡೆಸದಂತೆ ಕೆಲವರು ಉಚ್ಚ ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ನ್ಯಾಯಾಲಯಗಳು ಸರಕಾರದ ತೀರ್ಮಾನವನ್ನು ಒಪ್ಪಿ ಪರೀಕ್ಷೆಗೆ ಅನುಮತಿ ನೀಡಿವೆ. ಹಾಗಾಗಿ ಸರಕಾರಕ್ಕೆ ಪರೀಕ್ಷೆ ನಡೆಸುವುದು ಆದ್ಯಕರ್ತವ್ಯವಾಗಿದ್ದು, ವಿದ್ಯಾರ್ಥಿಗಳ ಸಂಪೂರ್ಣ ಹಿತವನ್ನು ಕಾಪಾಡಲು ನಾವು ಬದ್ಧರಾಗಿದ್ದೇವೆ. ಯಾವುದೇ ಆತಂಕವಿಲ್ಲದೆ, ಪರೀಕ್ಷೆ ಎದುರಿಸುವಂತೆ ವಿದ್ಯಾರ್ಥಿಗಳಲ್ಲಿ ಸುರೇಶ್‍ ಕುಮಾರ್ ಮನವಿ ಮಾಡಿದರು.  

ಪರೀಕ್ಷಾ ಕೇಂದ್ರಗಳಲ್ಲಿ ಒಂದು ಲಕ್ಷ ಸಿಬ್ಬಂದಿ: ಎಂಟುವರೆ ಲಕ್ಷ ವಿದ್ಯಾರ್ಥಿಗಳು ಸುರಕ್ಷಿತವಾಗಿ ಪರೀಕ್ಷೆಯನ್ನು ಬರೆಯಲು ಶಿಕ್ಷಣ, ಗೃಹ, ಆರೋಗ್ಯ ಮತ್ತು ಸಾರಿಗೆ ಇಲಾಖೆಯ ಒಂದು ಲಕ್ಷಕ್ಕೂ ಹೆಚ್ಚಿನ ಸಿಬ್ಬಂದಿಯನ್ನು ಪರೀಕ್ಷಾ ಕಾರ್ಯಗಳಿಗೆ ನಿಯೋಜಿಸಲಾಗಿದೆ. ಪ್ರತಿ ಪರೀಕ್ಷಾ ಕೊಠಡಿಗಳು ಸೊಂಕು ನಿವಾರಕ ದ್ರವಣದಿಂದ ಸ್ಯಾನಿಟೈಸ್‍ಗೆ ಒಳಗಾಗಿವೆ. ಪರೀಕ್ಷಾ ಕೇಂದ್ರದ ಸುತ್ತಲಿನ ಸೈಬರ್, ಜೆರಾಕ್ಸ್ ಕೇಂದ್ರಗಳು ಮುಚ್ಚಲಿವೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರಲು ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.

ಮಕ್ಕಳನ್ನು ಪರೀಕ್ಷಾ ಕೇಂದ್ರಗಳಿಗೆ ಬಿಡುವ ಪೋಷಕರು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದರ ಜೊತೆಗೆ ಪರೀಕ್ಷಾ ಸಂದರ್ಭದಲ್ಲಿ ಸುರಕ್ಷಿತವಾಗಿ ಅಂತರವನ್ನು ಕಾಯ್ದುಕೊಂಡು ಪರೀಕ್ಷೆ ಬರೆಯಲು ತಮ್ಮ ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕೆಂದು ಸಚಿವ ಸುರೇಶ್‍ ಕುಮಾರ್ ಮನವಿ ಮಾಡಿದರು.

ಗೃಹ ಇಲಾಖೆಯ ಸಂಪೂರ್ಣ ಸಹಕಾರ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಶಿಕ್ಷಣ ಇಲಾಖೆಯ ಎಲ್ಲ ಕ್ರಮಗಳಿಗೆ ಗೃಹ ಇಲಾಖೆಯು ಸಂಪೂರ್ಣ ಸಹಕಾರವಿದೆ. ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವರೆಗೂ ನಿಷೇದಾಜ್ಞೆಯನ್ನು ಪೊಲೀಸ್ ಇಲಾಖೆಯು ಜಾರಿಯಲ್ಲಿಡಲ್ಲಿದ್ದು, ಪರೀಕ್ಷಾ ಕೇಂದ್ರಗಳ ಪ್ರವೇಶದ್ವಾರ ಹಾಗೂ ಮುಂಭಾಗದಲ್ಲಿ ಜನದಟ್ಟಣೆ ಉಂಟಾಗದ ರೀತಿಯಲ್ಲಿ ನಿಯಂತ್ರಣ, ಪರೀಕ್ಷಾ ಅಕ್ರಮಗಳು ನಡೆಯದಂತೆ ಎಲ್ಲ ಸುರಕ್ಷಿತ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಳ್ಳಲಿದೆ ಎಂದರು. 

ಸಹಾಯವಾಣಿ: ಪರೀಕ್ಷಾ ಕೇಂದ್ರಗಳಲ್ಲಿ ಉದ್ಬವಿಸಬಹುದಾದ ಸಮಸ್ಯೆಗಳು ಹಾಗೂ ಸಂದೇಹಗಳನ್ನು ಪರಿಹರಿಸಲು ಕೇಂದ್ರಿಕೃತ ಸಹಾಯವಾಣಿಯನ್ನು ಶಿಕ್ಷಣ ಇಲಾಖೆಯು ತೆರೆದಿದ್ದು, 080-23310075 ಹಾಗೂ 080-23310076ಗಳು ಕಾರ್ಯನಿರ್ವಹಿಸಲಿವೆ ಯಾವುದೇ ಪರೀಕ್ಷ ಕೇಂದ್ರಿತ ಸಮಸ್ಯೆಗಳಿಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ಸುಮಂಗಲ ನೋಡೆಲ್ ಅಧಿಕಾರಿಯಾಗಿ ಕೆಲಸ ಮಾಡುವವರಿದ್ದು ಅವರನ್ನು ಯಾವುದೇ ಸಂದರ್ಭದಲ್ಲಿಯೂ ದೂರವಾಣಿ ಸಂಖ್ಯೆ 9449049434 ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಸುರೇಶ್‍ ಕುಮಾರ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News