ಇಂಧನ ಬೆಲೆ ಏರಿಕೆಗೆ ವಿರೋಧ: ಪ್ರಧಾನಿಯ ಅಣುಕು ಸಮಾಧಿ ಮಾಡಿ ದಾವಣಗೆರೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ

Update: 2020-06-24 18:05 GMT

ದಾವಣಗೆರೆ, ಜೂ.24: ಇಂಧನಗಳ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ದ ನಗರದ 25 ಕ್ಕೂ ಹೆಚ್ಚು ಪೆಟ್ರೋಲ್ ಬಂಕ್‍ಗಳ ಮುಂದೆ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. 

ಇಲ್ಲಿನ ಲಕ್ಷ್ಮಿ ಪ್ಲೋರ್ ಮಿಲ್ ಬಳಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಣುಕು ಸಮಾಧಿ ನಿರ್ಮಾಣ ಮಾಡಿ ಕೇಂದ್ರದ ಆಡಳಿತವನ್ನು ಖಂಡಿಸಿದರು. 

ಯುಪಿಎ ಅಧಿಕಾರದಲ್ಲಿದ್ದ ವೇಳೆ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 130 ಡಾಲರ್ ಇದ್ದರೂ ಸಹ ಪೆಟ್ರೋಲ್ ಬೆಲೆ ರಾಜ್ಯದಲ್ಲಿ 80 ರೂ ದಾಟಿರಲಿಲ್ಲ. ಆದರೆ ಈಗ ಕಚ್ಚಾ ತೈಲದ ಬೆಲೆ ಬ್ಯಾರಲ್ ಗೆ 39 ಡಾಲರಿದ್ದರೂ ಸಹ ಕಳೆದ 15 ದಿನಗಳಿಂದ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಇದರಿಂದಾಗಿ ದಿನನಿತ್ಯ ಬಳಕೆಯ ವಸ್ತುಗಳ ಬೆಲೆಯೂ ಸಹಜವಾಗಿ ಏರಿಕೆಯಾಗುತ್ತದೆ. ಕೋವಿಡ್-19 ಲಾಕ್‍ಡೌನ್ ನಂತರ ಸಂಕಷ್ಟದ ಪರಿಸ್ಥಿತಿಯಲ್ಲಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದರೆ ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟವಾಗುತ್ತದೆ ಎಂದು ಕೇಂದ್ರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು. 

ಸೈನಿಕರ ಮೇಲೆ ದಾಳಿ ನಡೆಸಿ 20 ಕ್ಕೂ ಹೆಚ್ಚು ಯೋಧರನ್ನು ಕೊಂದ ಚೈನಾ ದೇಶದ ವಿರುದ್ಧ ದೇಶವೇ ಒಂದಾಗಬೇಕಿದ್ದು ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಚೀನಾ ವಸ್ತುಗಳ ಆಮದನ್ನು ನಿಲ್ಲಿಸಬೇಕು. ಚೀನಾ ವಸ್ತುಗಳಿಗಿಂತ ದೇಶ ಮುಖ್ಯ. ಆದ್ದರಿಂದ ಸರ್ಕಾರ ದ್ವಂದ್ವ ನಿಲುವು ಕೈಬಿಡಬೇಕು ಎಂದು ಆಗ್ರಹಿಸಿದರು.  

ನಗರದ ಸುಮಾರು 25 ಕ್ಕೂ ಹೆಚ್ಚು ಪೆಟ್ರೋಲ್ ಬಂಕ್ ಗಳ ಬಳಿ ಕಾಂಗ್ರೆಸ್ ಕಾರ್ಯಕರ್ತರು ಮಾಸ್ಕ್ ಧರಿಸಿ ಪ್ರತಿಭಟನೆ ನಡೆಸಿದರು. ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪ, ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಕಾಂಗ್ರೆಸ್ ಮುಖಂಡ ದಿನೇಶ್ ಕೆ ಶೆಟ್ಟಿ, ಮುದ್ರೇಗೌಡ್ ಗೀರೀಶ್, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್, ಪಾಲಿಕೆ ಸದಸ್ಯರಾದ ದೇವರಮನೆ ಶಿವಕುಮಾರ್, ಚಮನ್ ಸಾಬ್, ವಿನಾಯಕ ಪೈಲ್ವಾನ್, ಜಿಪಂ ಸದಸ್ಯ ಬಸವಂತಪ್ಪ, ಆಯೂಬ್ ಪೈಲ್ವಾನ್, ನಲ್ಲೂರು, ಶಾಮನೂರು ಬಸವರಾಜ್, ರಾಘವೇಂದ್ರ, ಗಡಿಗುಡಾಳ ಮಂಜುನಾಥ, ಮಹಿಳಾ ಘಟಕದ ಅನಿತಾಬಾಯಿ, ಬಿ.ಎಚ್.ವೀರಭದ್ರಪ್ಪ, ಅಬ್ದುಲ್ ಲತೀಫ್, ನಿಖಿಲ್, ಆಶಾಮುರಳಿ, ಹರೀಶ್ ಬಸಾಪುರ, ಯುವರಾಜ್, ನಂಜಾನಾಯ್ಕ್, ಹಾಲೇಶ್, ಚಂದ್ರು ಸೇರಿದಂತೆ ಹಲವರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News