ಕೋವಿಡ್-19: ಪೊಲೀಸರ ಸೇವೆ ಸ್ಮರಣೀಯ ಎಂದು ಭಾವುಕರಾದ ಗೃಹ ಸಚಿವ ಬೊಮ್ಮಾಯಿ

Update: 2020-06-25 17:27 GMT

ಬೆಂಗಳೂರು, ಜೂ.25: ಕೋವಿಡ್-19 ಸಂಬಂಧ ಪೊಲೀಸ್ ಇಲಾಖೆಯ ಪ್ರತಿಯೊಬ್ಬರ ಸೇವೆ ಸ್ಮರಣೀಯವಾಗಿದ್ದು, ಸರಕಾರ ಸಂಪೂರ್ಣವಾಗಿ ತಮ್ಮ ಜೊತೆಗೆ ಇದೆ ಎಂದು ನುಡಿದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಭಾವುಕರಾದರು.

ಗುರುವಾರ ನಗರ ಪೊಲೀಸ್ ಆಯುಕ್ತ ಕಚೇರಿಯಲ್ಲಿ ಕೊರೋನ ಸೈನಿಕರಾಗಿ ಸೇವೆ ಸಲ್ಲಿಸಿ ಸೋಂಕಿನ ಪರಿಣಾಮ ಮೃತಪಟ್ಟಿರುವ ಮೂವರು ಪೊಲೀಸ್ ಕುಟುಂಬಗಳಿಗೆ ತಲಾ 30 ಲಕ್ಷ ರೂ.ಗಳ ಚೆಕ್ ಅನ್ನು ಬಿಡುಗಡೆ ಮಾಡಿದ ಬಳಿಕ ಅವರು ಮಾತನಾಡಿದರು.

ನಮ್ಮ ಇಲಾಖೆಯ ಪ್ರತಿಯೊಬ್ಬ ಕಾನ್‍ಸ್ಟೇಬಲ್ ಬಗ್ಗೆ ಕಾಳಜಿ ಇದೆ. ಎಲ್ಲರಿಗೂ ಆರೋಗ್ಯ ಕವಚ, ಮಾಸ್ಕ್ ಹೆಡ್‍ಗೇರ್, ಸ್ಯಾನಿಟೈಸರ್ ನೀಡುತ್ತಿದ್ದೇವೆ. ಕ್ವಾರಂಟೈನ್ ಪ್ರಕ್ರಿಯೆ ಸಂದರ್ಭದಲ್ಲೂ ಪೊಲೀಸ್ ಇಲಾಖೆ ಹೆಚ್ಚು ಕಾರ್ಯನಿರ್ವಹಿಸುತ್ತಿದೆ. ಒಟ್ಟಾರೆ ಕೋವಿಡ್-19 ವಿರುದ್ಧ ಹೋರಾಡಲು ಪೊಲೀಸರು ಸದಾ ಸಿದ್ಧಗೊಂಡಿದ್ದಾರೆ ಎಂದರು.

ಪೊಲೀಸ್ ಇಲಾಖೆಗೆ ಕೊರೋನ ಕಂಟಕವಾಗಿದೆ ಎಂದ ಅವರು, ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮೂವರು ಪೊಲೀಸರನ್ನು ನಾವು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅವರ ಕುಟುಂಬದ ಸದಸ್ಯರಿಗೆ ಈ ನೋವು ಭರಿಸುವ ಶಕ್ತಿ ದೇವರು ನೀಡಲಿ ಎಂದು ನುಡಿದರು.

ಈ ಸಂದರ್ಭದಲ್ಲಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News