ಹಾಸನ: ಮತ್ತೆ 12 ಮಂದಿಗೆ ಕೊರೋನ ಸೋಂಕು; 312ಕ್ಕೆ ಏರಿದ ಒಟ್ಟು ಸೋಂಕಿತರ ಸಂಖ್ಯೆ

Update: 2020-06-25 17:34 GMT

ಹಾಸನ, ಜೂ.25: ಜಿಲ್ಲೆಯಲ್ಲಿ ಕೊರೋನ ವೈರಸ್ ಹರಡುತ್ತಿರುವುದು ಹೆಚ್ಚಾಗಿದ್ದು, ಗುರುವಾರ ಒಂದೆ ದಿನ 12 ಜನರಿಗೆ ಕೊರೋನ ಪಾಸಿಟಿವ್ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿವರೆಗೂ ಒಟ್ಟು 312 ಜನರಿಗೆ ಕೊರೋನ ಸೋಂಕು ಇರುವುದು ದೃಢಪಟ್ಟಿದೆ. ಗುಣಮುಖರಾಗಿ 236 ಜನರು ಮನೆಗೆ ವಾಪಸ್ ಹೋಗಿದ್ದು, ಇನ್ನು 81 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಸನ ನಗರದ 1 ಹಾಗೂ ಆಲೂರು ತಾಲೂಕಿನ 1 ಏರಿಯಾ ಸೇರಿ ಎರಡು ಕಡೆ ಕಂಟೈನೈಂಟ್ ಘೋಷಣೆ ಮಾಡಲಾಗಿದೆ. ಕೊರೋನ ಸೋಂಕು ಹರಡಿರುವವರೆಲ್ಲಾ ಬಹುತೇಕ ಮುಂಬೈನಿಂದ ಬಂದವರೇ ಆಗಿದ್ದಾರೆ ಎಂದರು.

ಓರ್ವ ಪೊಲೀಸ್ ಪೇದೆಯಿಂದ ಆರು ಜನರಿಗೆ ಕೊರೋನ ಸೋಂಕು ಹರಡಿದೆ. ಸೋಂಕಿತ ಪೇದೆಯ ಕುಟುಂಬದಲ್ಲಿ 3 ವರ್ಷದ ಮಗಳು, 8 ವರ್ಷದ ಪುತ್ರ, ಹೆಂಡತಿ ಹಾಗೂ ಅತ್ತೆ-ಮಾವನಿಗೂ ಕೂಡ ವೈರಸ್ ಇರುವುದು ಕಂಡು ಬಂದಿದೆ. ಜೊತೆಗೆ ಪ್ರಾಥಮಿಕ ಸಂಪರ್ಕದಿಂದ ಕೆ.ಆರ್.ಪುರಂ ಪೊಲೀಸ್ ಠಾಣೆಯ ಮತ್ತೋರ್ವ ಪೊಲೀಸ್ ಗೆ ಸೋಂಕು ಇರುವುದು ದೃಢಪಟ್ಟಿದೆ. ಇನ್ನು ರಜೆಯ ಮೇಲೆ ಊರಿಗೆ ಬಂದಿದ್ದ ಸೈನಿಕನಿಗೂ ಕೊರೋನ ಹರಡಿದೆ. ನಗರದಲ್ಲಿ ಶುಂಠಿ ವ್ಯಾಪಾರ ಮಾಡುವ ಓರ್ವನಿಗೆ ವೈರಸ್ ಹರಡಿದೆ. ಎರಡು ದಿನಗಳ ಹಿಂದೆ ಕಾಣಿಸಿಕೊಂಡ ಜ್ವರ ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ಬೆಳಕಿಗೆ ಬಂದಿದೆ ಎಂದು ಇದೆ ವೇಳೆ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಕೊರೋನ ಭೀತಿಯಲ್ಲಿ 924 ಜನ ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆಯಲು ಹಾಜರಾಗಿಲ್ಲ. ಕಂಟೈನ್ಮೆಂಟ್ ಝೋನ್ ನಿಂದ ಇಬ್ಬರು ಮಕ್ಕಳು ಪರೀಕ್ಷೆ ಬರೆಯಲು ಹಾಜರಾಗಿದ್ದಾರೆ. ರಾಜ್ಯದ ಇತರೆ ಜಿಲ್ಲೆಗಳಿಂದ ಇಲ್ಲಿಗೆ ಬಂದು 502 ಜನ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಒಟ್ಟಾರೆ ಪರೀಕ್ಷೆಯು ಸುರಕ್ಷಿತವಾಗಿ ಮತ್ತು ಸುಗಮವಾಗಿ ನಡೆದಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News