ಖಾಸಗಿ ಆಸ್ಪತ್ರೆಗಳ ಲಾಬಿಗೆ ಮಣಿದ ರಾಜ್ಯ ಸರಕಾರ: ಸಿಪಿಎಂ ಆರೋಪ

Update: 2020-06-25 18:04 GMT

ಬೆಂಗಳೂರು, ಜೂ.25: ರಾಜ್ಯ ಬಿಜೆಪಿ ಸರಕಾರವು ಹೆಚ್ಚುತ್ತಿರುವ ಕೋವಿಡ್ ಸೋಂಕಿತರ ನೆಪ ಮಾಡಿ ಸಾರ್ವಜನಿಕ ಆಸ್ಪತ್ರೆಗಳಲ್ಲಿನ ಸೌಲಭ್ಯಗಳ ಕೊರತೆಯನ್ನು ನೀಗಿಸುವ ಬದಲು ಟಾಸ್ಕ್ ಫೋರ್ಸ್ ಶಿಫಾರಸ್ಸು ಮಾಡಿರುವ ದುಬಾರಿ ಶುಲ್ಕಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಕೋವಿಡ್ ರೋಗಿಗಳಿಗೆ ನಿಗದಿ ಪಡಿಸುವ ಮೂಲಕ ಖಾಸಗಿ ಆಸ್ಪತ್ರೆಗಳ ಲಾಬಿಗೆ ಮಣಿದಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಖಂಡಿಸಿದೆ.

ನಿಗದಿ ಪಡಿಸಿರುವ ದರಗಳು ಕೋವಿಡ್ ನಿಂದ ಬದುಕುಳಿಯುವ ಕುಟುಂಬಗಳನ್ನು ಶಾಶ್ವತವಾಗಿ ಬಡತನರೇಖೆಗಿಂತ ಕೆಳಗೆ ತಳ್ಳಲಿವೆ, ಜೀವನ ಪರ್ಯಂತ ಕೋವಿಡ್‍ನಿಂದ ಬದುಕುಳಿಯಲು, ಮಾಡಿದ ಸಾಲ ತೀರಿಸಲು ಹೆಣಗಬೇಕಾಗುವಂತೆ ಈ ದರ ನಿಗದಿಯು ಜನತೆಯನ್ನು ಖಾಸಗಿ ಆಸ್ಪತ್ರೆಗಳ ಲಾಬಿಗೆ ಬಲಿ ಹಾಕಲಿದೆ ಎಂದು ಸಿಪಿಎಂ ದೂರಿದೆ.

ರಾಜ್ಯ ಬಿಜೆಪಿ ಸರಕಾರಕ್ಕೆ ಜನತೆಯ ಆರೋಗ್ಯಕ್ಕಿಂತ ಖಾಸಗಿ ಆಸ್ಪತ್ರೆಗಳ ಹಿತವೇ ಪ್ರಧಾನವಾಗಿರುವುದು ನಿಶ್ಚಳವಾಗಿ ಬಹಿರಂಗಗೊಂಡಿದೆ. ಕೋವಿಡ್ ಸಾಂಕ್ರಾಮಿಕ ರೋಗವು ಕುಟುಂಬದಲ್ಲಿ ಒಬ್ಬರಿಗೆ ಬಂದರೆ ಇಡೀ ಕುಟುಂಬಕ್ಕೆ ಹಬ್ಬುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹಾಗೇನಾದರೂ ಆದಲ್ಲಿ ಕುಟುಂಬದ ನಾಲ್ಕು ಜನರಿಗೆ ಚಿಕಿತ್ಸೆ ಕೊಡಿಸಲು ದಿನದ ಲೆಕ್ಕದಲ್ಲಿ ರಾಜ್ಯ ಸರಕಾರವು ನಿಗದಿ ಪಡಿಸಿರುವ ಹಾಲಿ ದರಗಳು ಲಕ್ಷಾಂತರ ರೂ. ಗಳಾಗಿ ಪರಿಣಮಿಸಲಿವೆ. ಆಯುಷ್ಮಾನ್ ಭಾರತ್ ಯೋಜನೆಗೆ ಒಳಪಡದ ಕುಟುಂಬಗಳು ಈ ದರ ನಿಗದಿಯಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ದುರ್ಬರಗೊಳ್ಳಲಿದೆ.

ಆಯುಷ್ಮಾನ್ ಭಾರತ ಕಾರ್ಡ್ ಇರುವವರಿಗೂ ನಿಗದಿಪಡಿಸಿರುವ ದರಗಳು ಸರಕಾರದ ಹಣವನ್ನು ದೊಡ್ಡ ಪ್ರಮಾಣದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ವರ್ಗಾಯಿಸಲಿದೆ. ಸಾರ್ವಜನಿಕ ಆಸ್ಪತ್ರೆಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಹಾಸಿಗೆಗಳ ಕೊರತೆ ಜನತೆಯನ್ನು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ದೂಡಲಿದೆ. ಈ ಅವಕಾಶವನ್ನು ಬಳಸಿ ಖಾಸಗಿ ಆಸ್ಪತ್ರೆಗಳು ಜನತೆಯ ಸಂಕಷ್ಟದಲ್ಲಿ ಉತ್ತಮ ಲಾಭ ಮಾಡಿಕೊಳ್ಳಲು ಈ ದರ ನಿಗದಿಯು ಅವಕಾಶ ಕಲ್ಪಿಸಲಿದೆ ಎಂದು ಸಿಪಿಎಂ ಖಂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News