ಆರೆಸೆಸ್ಸ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹೈಕೋರ್ಟ್ ರಿಜಿಸ್ಟ್ರಾರ್ ಗೆ ಆರೆಸೆಸ್ಸ್ ಮಾಜಿ ಪ್ರಚಾರಕ ದೂರು
ಬೆಂಗಳೂರು, ಜೂ. 26: 'ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸೆಸ್ಸ್) ದೇಶಭಕ್ತಿ, ಧರ್ಮ, ಸಂಸ್ಕೃತಿ, ತ್ಯಾಗ, ಶಿಸ್ತು, ಸೇವೆ, ಸಾಂಸ್ಕೃತಿಕ ಚಟುವಟಿಕೆಗಳ ಹೆಸರಿನಲ್ಲಿ ಸಂಘಟನೆಯಲ್ಲಿ ತೊಡಗಿದ್ದು, ಗುರುಪೂಜೆ, ಗುರುದಕ್ಷಿಣೆಯ ಸಮರ್ಪಣೆ ನೆಪದಲ್ಲಿ ಅಕ್ರಮವಾಗಿ ಹಣ ಸಂಗ್ರಹಣೆ ಮಾಡುತ್ತಿದೆ. ನೋಂದಣಿ ಮಾಡಿಸದೆ, ಖರ್ಚು, ವೆಚ್ಚಗಳ ಲೆಕ್ಕವನ್ನು ಸರಕಾರಕ್ಕೆ ನೀಡದೆ ವಂಚಿಸುತ್ತಿರುವ ಈ ಸಂಘಟನೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ಕೋರಿ ಸರಕಾರದ ಮುಖ್ಯ ಕಾರ್ಯದರ್ಶಿ, ಹೈಕೋರ್ಟಿನ ರಿಜಿಸ್ಟ್ರಾರ್ ಜನರಲ್‍ಗೆ, ಸಾಮಾಜಿಕ ಕಾರ್ಯಕರ್ತ ಹಾಗೂ ಆರೆಸ್ಸೆಸ್ ನ ಮಾಜಿ ಪ್ರಚಾಕರ ಎನ್.ಹನುಮೇಗೌಡ ದೂರು ನೀಡಿದ್ದಾರೆ.
ಎನ್.ಹನುಮೇಗೌಡ
ದೇಶದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನ ಒಪ್ಪಿದರೆ ಮಾತ್ರ ಇಲ್ಲಿ ಹಣ, ಆಸ್ತಿ ಮಾಡುವ ಹಕ್ಕಿದೆ. ಸಂವಿಧಾನ ಒಪ್ಪದ ವ್ಯಕ್ತಿಗೆ ಹಕ್ಕು-ಕರ್ತವ್ಯಗಳನ್ನು, ರಾಷ್ಟ್ರೀಯತೆಯ ಪ್ರಶ್ನೆಯನ್ನು ಎತ್ತುವ ಹಕ್ಕಿಲ್ಲ. ವ್ಯಕಿಯೊಬ್ಬನಿಗೆ ಇಷ್ಟೆಲ್ಲ ಕಾನೂನು ಅನ್ವಯ ಆಗುವ ವೇಳೆ ಲಕ್ಷಾಂತರ ಜನರು ಭಾಗವಹಿಸುವ ಒಂದು ಸಂಘಟನೆಗೆ ಕಾನೂನು ಚೌಕಟ್ಟು ಏಕೆ ಅನ್ವಯ ಆಗುವುದಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಆರೆಸ್ಸೆಸ್ ಜುಲೈ ತಿಂಗಳಲ್ಲಿ ಬರುವ ಗುರುಪೂರ್ಣಿಮೆಯ ಹದಿನೈದು ಇಪ್ಪತ್ತು ದಿನ ಮೊದಲೇ ಒಳಾಂಗಣದಲ್ಲಿ ಗುರುಪೂಜೆ ಏರ್ಪಡಿಸಿ ಬಹುತೇಕರಿಂದ ಬೇನಾಮಿ ಹಣವನ್ನು ಗುರುದಕ್ಷಿಣೆ ಸಮರ್ಪಣೆ ಹೆಸರಿನಲ್ಲಿ ಸಂಗ್ರಹಿಸಲಾಗುತ್ತದೆ. ಒಂದು ಅಂದಾಜಿನ ಪ್ರಕಾರ ಬೆಂಗಳೂರು ಒಂದರಲ್ಲೆ ಕನಿಷ್ಟ ವಾರ್ಷಿಕ 2 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಹಣ ಸಂಗ್ರವಾಗುತ್ತದೆ. ಇದರಲ್ಲಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ಅಕ್ರಮ ಹಣದ ಪಾಲು ಹೆಚ್ಚಿದೆ ಎಂದು ಅವರು ಆರೋಪಿಸಿದ್ದಾರೆ.
ಆರೆಸ್ಸೆಸ್ ಶಾಖೆಗಳಲ್ಲಿ ನಿತ್ಯವೂ ಕಾನೂನಿಗೆ ವಿರುದ್ಧವಾಗಿ ದಂಡ, ಕತ್ತಿ, ಖಡ್ಗಗಳ ಸಹಿತ ಮೆರೆವಣಿಗೆ ನಡೆಸುವುದು, ನಿಷೇಧಿತ ಶಸ್ತ್ರಾಸ್ತ್ರಗಳ ಬಳಕೆ ಮಾಡುವುದು ಏಕೆ ಕಾನೂನಿನ ಅಡಿಯಲ್ಲಿ ಬರುವುದಿಲ್ಲ. ಕೊರೋನ ಸೋಂಕಿನಂತಹ ವಿಪತ್ತಿನ ಸಂದರ್ಭದಲ್ಲಿಯೂ ಏಕೆ ಇವರ ಚಟುವಟಿಕೆಗಳಿಗೆ ನಿರ್ಬಂಧವಿಲ್ಲ. ಆರೆಸ್ಸೆಸ್ ರಾಜ್ಯದಲ್ಲಿ ಎಲ್ಲಿಯೂ ಸ್ವಂತ ಕಚೇರಿಯನ್ನು ಹೊಂದಿಲ್ಲ. ಸದಸ್ಯತ್ವದ ರಿಜಿಸ್ಟಾರ್ ಕೂಡ ಇಲ್ಲ. ಹೀಗಾಗಿ ಹಲ್ಲೆ, ಗಲಭೆಗಳ ಸಂದರ್ಭದಲ್ಲಿ ಯಾರೂ ಸಿಕ್ಕಿಹಾಕಿಕೊಳ್ಳುವುದಿಲ್ಲ. ಇಲ್ಲಿನ ಕಾನೂನು ಗೌರವಿಸದವರನ್ನು ದೇಶಭಕ್ತ ಸಂಘಟಕರು ಅಥವಾ ದೇಶಭಕ್ತರ ಸಂಘಟನೆ ಎಂದು ಏಕೆ ಕರೆಯಬೇಕು ಎಂದು ಹನುಮೇಗೌಡ ದೂರಿನಲ್ಲಿ ಪ್ರಶ್ನಿಸಿದ್ದಾರೆ.