ವಿದ್ಯಾರ್ಥಿಗಳು ಮಾದಕ ವಸ್ತು ದಂಧೆಯಲ್ಲಿ ಸಿಕ್ಕಿಬಿದ್ದರೆ ಕಾಲೇಜು ಆಡಳಿತ ವಿರುದ್ಧ ಕಠಿಣ ಕ್ರಮ

Update: 2020-06-26 17:09 GMT

ಬೆಂಗಳೂರು, ಜೂ.26: ವಿದ್ಯಾರ್ಥಿಗಳು ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿರುವುದು ಸಿಕ್ಕಿಬಿದ್ದರೆ, ಕಾಲೇಜು ಆಡಳಿತ ಮಂಡಳಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ನಗರದ ನೃಪತುಂಗ ರಸ್ತೆಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ‘ಮಾದಕ ವಸ್ತು ವಿರೋಧಿ ದಿನ’ವನ್ನು ಉದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮಾದಕ ವಸ್ತು ಸೇವನೆ ಹಾಗೂ ಮಾರಾಟ ದಂಧೆಯಲ್ಲಿ ಹೆಚ್ಚಾಗಿ ತೊಡಗುತ್ತಿದ್ದು, ಇದು ಸಿಸಿಬಿ ಪೊಲೀಸರ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ. ಇಂತಹ ಪ್ರಕರಣಗಳು ಮುಂದೆ ಬೆಳಕಿಗೆ ಬಂದರೆ ಆಡಳಿತ ಮಂಡಳಿಯ ವಿರುದ್ಧ ಶಿಸ್ತು ಕ್ರಮಕ್ಕೆ ಬದ್ಧ ಎಂದರು.

ಮಾದಕ ವಸ್ತು ಸಮಾಜಕ್ಕೆ ಹಾಗೂ ಮನುಕುಲಕ್ಕೆ ಮಾರಕವಾಗಿ ಪರಿಣಮಿಸಿದೆ. ಇದು ವ್ಯಕ್ತಿಯನ್ನು ಮಾತ್ರ ನಾಶ ಮಾಡುವುದಲ್ಲದೇ, ಚಾರಿತ್ರ್ಯವೂ ಹಾಳಾಗುತ್ತಿದೆ. ಚಾರಿತ್ರ್ಯ ಉಳಿಸಿಕೊಳ್ಳದಿದ್ದರೆ ಮಾನವೀಯತೆ ಉಳಿಯುವುದಿಲ್ಲ. ಮಾದಕ ವಸ್ತು ನಿಯಂತ್ರಿಸದಿದ್ದರೆ ಮುಂದಿನ ದಿನಗಳಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ಹೊರದೇಶ ಹಾಗೂ ಹೊರರಾಜ್ಯದಿಂದ ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರು ಸೇರಿದಂತೆ ರಾಜ್ಯ ಇನ್ನಿತರೆ ಕಡೆಗೆ ಬರುವ ವಿದ್ಯಾರ್ಥಿಗಳು, ಮಾದಕ ವಸ್ತು ದಂಧೆಗೆ ಇಳಿಯುತ್ತಿದ್ದಾರೆ.ಅಷ್ಟೇ ಅಲ್ಲದೆ, ಚಾಕೋಲೆಟ್ ರೂಪದಲ್ಲಿ ಮಾರಾಟವಾಗುತ್ತಿದೆ. ಹೀಗಾಗಿ, ವಿದ್ಯಾರ್ಥಿಗಳ ಚಟುವಟಿಕೆಗಳ ಮೇಲೆ ಕಾಲೇಜಿನ ಆಡಳಿತ ಮಂಡಳಿ ನಿಗಾವಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೇರಿದಂತೆ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News