ತುರ್ತುಪರಿಸ್ಥಿತಿಗಿಂತಲೂ ಭೀಕರ ಈ ಅಘೋಷಿತ ತುರ್ತುಪರಿಸ್ಥಿತಿ

Update: 2020-06-27 04:42 GMT

ಭಾರತದ ಮೇಲೆ ಇಂದಿರಾಗಾಂಧಿ ಹೇರಿದ ತುರ್ತು ಪರಿಸ್ಥಿತಿಗೆ 45 ವರ್ಷಗಳು ಸಂದಿವೆ. ಜೂನ್ 1975ರಿಂದ 1977ರವರೆಗೆ ಅಂದರೆ, ಸುಮಾರು 2 ವರ್ಷ ಭಾರತದ ಪ್ರಜಾಸತ್ತೆಯನ್ನು ಇಂದಿರಾಗಾಂಧಿ ಅಮಾನತಿನಲ್ಲಿಟ್ಟಿದ್ದರು. ಈ ದೇಶದ ಸಂವಿಧಾನ ಮತ್ತು ಪ್ರಜಾಸತ್ತೆಗೆ ಮತ್ತೊಮ್ಮೆ ಅಂತಹ ಸ್ಥಿತಿ ಒದಗಬಾರದು ಎನ್ನುವ ಕಾರಣಕ್ಕಾಗಿ ಆ ಎರಡು ವರ್ಷಗಳ ಕಹಿಯನ್ನು ನಾವು ಪ್ರತಿ ವರ್ಷ ಸ್ಮರಿಸುವುದು ಅತ್ಯಗತ್ಯವಾಗಿದೆ. ದೇಶದ ಸಂವಿಧಾನಕ್ಕಿಂತ ಅದನ್ನಾಳುವ ನಾಯಕನನ್ನೇ ಜನರು ಆರಾಧಿಸತೊಡಗಿದರೆ, ಅಂತಿಮವಾಗಿ ಆತ ಹೇಗೆ ಸರ್ವಾಧಿಕಾರಿಯಾಗಿ ಸಂವಿಧಾನವನ್ನೇ ತುಳಿಯಬಲ್ಲ ಎನ್ನುವುದಕ್ಕೆ ಆ ಎರಡು ವರ್ಷ ನಮಗೆ ಪಾಠವಾಗಿದೆ.

ಈ ನಿಟ್ಟಿನಲ್ಲಿ, ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿ ಪ್ರಜಾಸತ್ತೆಯನ್ನು ಮರುಸ್ಥಾಪನೆ ಮಾಡುವಲ್ಲಿ ಯಶಸ್ವಿಯಾದ ನಾಯಕರನ್ನು ನಾವು ಸ್ಮರಿಸುವುದು ಅತ್ಯಗತ್ಯವಾಗಿದೆ. ಗುರುವಾರ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟೊಂದನ್ನು ಮಾಡಿ ‘‘ಪ್ರಜಾಪ್ರಭುತ್ವದ ರಕ್ಷಣೆಗೆ ಹೋರಾಡಿದ ಜನರ ತ್ಯಾಗವನ್ನು ಮರೆಯಬಾರದು’’ ಎಂದು ದೇಶಕ್ಕೆ ಕರೆ ನೀಡಿದ್ದಾರೆ. ‘‘ತುರ್ತು ಪರಿಸ್ಥಿತಿ ಹೇರಿಕೆಯಾದಾಗ ಅದಕ್ಕೆ ವ್ಯಕ್ತವಾದ ವಿರೋಧವು ಕೇವಲ ರಾಜಕೀಯ ವರ್ಗಕ್ಕೆ ಸೀಮಿತವಾಗಿರಲಿಲ್ಲ. ಪ್ರತಿಯೊಬ್ಬರನ್ನೂ ಅದು ಅಸಮಾಧಾನಗೊಳ್ಳುವಂತೆ ಮಾಡಿತು. ಕಳೆದು ಹೋದ ಪ್ರಜಾಪ್ರಭುತ್ವವನ್ನು ಮರಳಿ ಪಡೆಯುವುದಕ್ಕಾಗಿ ಜನರು ರೋಷ ತಪ್ತರಾಗಿದ್ದರು. ತಮ್ಮಿಂದ ಏನೋ ಒಂದನ್ನು ಕಿತ್ತುಕೊಳ್ಳಲಾಗಿದೆ ಎಂದು ಪ್ರತಿಯೊಬ್ಬ ನಾಗರಿಕನೂ ಭಾವಿಸಿದ್ದನು’’ ಎಂದೂ ಪ್ರಧಾನಿ ಮೋದಿ ತಮ್ಮ ಹೇಳಿಕೆಯಲ್ಲಿ ಸೇರಿಸಿದ್ದಾರೆ. ಇದರಲ್ಲಿ ಎರಡು ಮಾತಿಲ್ಲ. ತುರ್ತು ಪರಿಸ್ಥಿತಿಯನ್ನು ಈ ದೇಶದ ಪ್ರಜ್ಞಾವಂತ ಜನರು ಪಕ್ಷ ಭೇದಗಳನ್ನು ಮರೆತು ವಿರೋಧಿಸಿದ್ದರು. ಆದುದರಿಂದಲೇ ಹಳಿತಪ್ಪಿದ ಪ್ರಜಾಸತ್ತೆ ಮತ್ತೆ ಹಳಿ ಸೇರುವಂತಾಯಿತು.

ತುರ್ತು ಪರಿಸ್ಥಿತಿ ಈ ದೇಶದ ಬುದ್ಧಿಜೀವಿಗಳು, ರಾಜಕೀಯ ಚಿಂತಕರು ಮತ್ತು ಬರಹಗಾರರ ಮೇಲೆ ನೇರ ದಾಳಿಯನ್ನು ಮಾಡಿತು. ಯಾರೆಲ್ಲ ಸರಕಾರದ ನೀತಿಯನ್ನು ಪ್ರಶ್ನಿಸಿದರೋ ಅವರೆಲ್ಲ ಜೈಲು ಸೇರುವ ಪರಿಸ್ಥಿತಿ ನಿರ್ಮಾಣವಾಯಿತು. ಯಾಕೆಂದರೆ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸರಕಾರವನ್ನಾಗಲಿ, ಅದರ ನೀತಿಯನ್ನಾಗಲಿ ಟೀಕಿಸುವುದೇ ದೇಶದ್ರೋಹವಾಗಿ ಬಿಡುತ್ತದೆ. ಸರಕಾರದ ವಿರುದ್ಧ ಬರೆದರೆ ಪತ್ರಕರ್ತರು ಅನಿವಾರ್ಯವಾಗಿ ಜೈಲು ಸೇರಬೇಕಾಗಿತ್ತು. ವಿಪರ್ಯಾಸವೆಂದರೆ, ಅಂದಿನ ತುರ್ತು ಪರಿಸ್ಥಿತಿಯನ್ನು ನೆನೆದುಕೊಂಡರೆ ದೇಶದ ವತರ್ಮಾನದ ಪರಿಸ್ಥಿತಿ ಅದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಸ್ಪಷ್ಟವಾಗಿ ಹೇಳಬೇಕೆಂದರೆ ಅದಕ್ಕಿಂತಲೂ ಭೀಕರವಾಗಿದೆ. ಈ ದೇಶದಲ್ಲಿ ಪ್ರಜಾಸತ್ತಾತ್ಮಕವಾದ ಸರಕಾರ ಅಸ್ತಿತ್ವದಲ್ಲಿದೆಯೆನ್ನುವುದು ಬಿಟ್ಟರೆ, ಉಳಿದಂತೆ ಅಘೋಷಿತ ತುರ್ತುಪರಿಸ್ಥಿತಿಯ ವಾತಾವರಣದಲ್ಲಿ ದೇಶ ಉಸಿರುಗಟ್ಟಿ ಬದುಕುತ್ತಿದೆ.

ಇಂದಿರಾಗಾಂಧಿಯ ತುರ್ತುಪರಿಸ್ಥಿತಿಯಲ್ಲಿ, ಸಂಜಯ್‌ಗಾಂಧಿಯ ಸರ್ವಾಧಿಕಾರಿ ದೌರ್ಜನ್ಯಗಳು ಕುಖ್ಯಾತಿಯನ್ನು ಪಡೆದಿದ್ದರೆ, ಸದ್ಯದ ದಿನಗಳಲ್ಲಿ ಅವರ ಸ್ಥಾನವನ್ನು ತುಂಬಲು ‘ಅಮಿತ್ ಶಾ’ರಂತಹ ನಾಯಕರು ಸರ್ವ ಪ್ರಯತ್ನವನ್ನ್ನೂ ಮಾಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್, ದಿಲ್ಲಿಯಲ್ಲಿ ಕಪಿಲ್ ಮಿಶ್ರಾ ಇವರೆಲ್ಲರ ಕೃತ್ಯಗಳು ತುರ್ತುಪರಿಸ್ಥಿತಿಯನ್ನು ನೆನಪಿಸುವಂತಿವೆ. ಆದರೆ ಆ ಕಾಲಘಟ್ಟದಲ್ಲಿ ತೀರಾ ತಳಸ್ತರದ ಜನರ ಆರ್ಥಿಕ ಬದುಕು ಮೂರಾಬಟ್ಟೆಯಾಗಿರಲಿಲ್ಲ. ಬದಲಿಗೆ, ಕೆಲವು ನಾಯಕರು ಆ ಸಂದರ್ಭವನ್ನು ಬಳಸಿಕೊಂಡು ‘ಭೂಸುಧಾರಣೆ ಕಾಯ್ದೆ’ಯನ್ನು ಯಶಸ್ವಿಯಾಗಿ ಜಾರಿಗೆ ತಂದರು. ಅಂದರೆ ಉಳ್ಳವರ ಕೈಯಿಂದ ಭೂಮಿಯನ್ನು ಕಿತ್ತುಕೊಂಡು ಇಲ್ಲದವರಿಗೆ ಹಂಚಿದರು. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ, ಕರಾವಳಿಯಲ್ಲಿ ಗೇಣಿದಾರರಾಗಿ ಬದುಕುತ್ತಿದ್ದ ನೂರಾರು ಬಿಲ್ಲವ ಸಮುದಾಯದ ಜನರು ಭೂಮಿಯ ಒಡೆಯರಾದರು. ಇಂದಿರಾಗಾಂಧಿ ಈ ಕಾನೂನನ್ನು ನಿರಂಕುಶವಾಗಿ ಜಾರಿ ಮಾಡದೇ ಇದ್ದಿದ್ದರೆ, ಇಂದಿಗೂ ಈ ಭಾಗದ ಬಹುತೇಕ ಹಿಂದುಳಿದವರ್ಗದ ಜನರು ಮೇಲ್ಜಾತಿಯ ಜನರ ಭೂಮಿಯ ಒಕ್ಕಲುಗಳಾಗಿಯೇ ಬದುಕಬೇಕಾಗಿತ್ತು. ಆದರೆ, 2020ರ ಅಘೋಷಿತ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ರೈತರ ಭೂಮಿಯನ್ನು ಕಾರ್ಪೊರೇಟ್ ಶಕ್ತಿಗಳಿಗೆ ನೀಡುವ ಕಾಯ್ದೆಗಳು ನಿರಂತರವಾಗಿ ಜಾರಿಗೊಳ್ಳುತ್ತಿವೆ. ಬ್ಯಾಂಕ್ ರಾಷ್ಟ್ರೀಕರಣದಂತಹ ಕ್ರಾಂತಿಕಾರಿ ಕೆಲಸಗಳನ್ನು ಇಂದಿರಾಗಾಂಧಿ ಮಾಡಿದ್ದರೆ, ಬ್ಯಾಂಕ್‌ಗಳನ್ನು ಒಂದೊಂದಾಗಿ ಮುಳುಗಿಸಿ ಅದನ್ನು ಸಂಪೂರ್ಣ ಖಾಸಗೀಕರಣಗೊಳಿಸುವ ಧಾವಂತದಲ್ಲಿದೆ ಇಂದಿನ ಸರಕಾರ.

 ‘ನೋಟು ನಿಷೇಧ’ ಯಾವ ತುರ್ತುಪರಿಸ್ಥಿತಿಗೂ ಕಡಿಮೆಯದಲ್ಲ. ಬಹುಶಃ ಜನರು ತಮ್ಮದೇ ಹಣಕ್ಕಾಗಿ ಬ್ಯಾಂಕ್‌ಗಳ ಮುಂದೆ ಕ್ಯೂ ನಿಲ್ಲಬೇಕಾದ ಸ್ಥಿತಿ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ನಿರ್ಮಾಣವಾಗಿರಲಿಲ್ಲ. ನೋಟು ನಿಷೇಧದ ಆಘಾತದಿಂದ ಜನರು ಇಂದಿಗೂ ಚೇತರಿಸಿಕೊಂಡಿಲ್ಲ. ಸಹಸ್ರಾರು ಕಾರ್ಮಿಕರು ಬೀದಿಗೆ ಬೀಳುವ ಸನ್ನಿವೇಶ ನೋಟು ನಿಷೇಧದಿಂದ ನಿರ್ಮಾಣವಾಯಿತು. ಈ ಆರ್ಥಿಕ ತುರ್ತುಪರಿಸ್ಥಿತಿ ಇದೀಗ ಲಾಕ್‌ಡೌನ್‌ನಿಂದಾಗಿ ಇನ್ನಷ್ಟು ವಿಷಮಿಸಿದೆ. ‘ತಾನು ಸಾಕಿದ ಜಾನುವಾರುಗಳನ್ನು ಯಾರಿಗೆ ಮಾರಬೇಕು, ಯಾರಿಗೆ ಮಾರಬಾರದು’ ಎನ್ನುವ ನಿರಂಕುಶ ಕಾಯ್ದೆ ಜಾರಿಗೊಂಡದ್ದೂ ಈ 2020ರ ಅಘೋಷಿತ ತುರ್ತುಪರಿಸ್ಥಿತಿಯ ಸಂದರ್ಭದಲ್ಲೇ. ನೋಟು ನಿಷೇಧದಿಂದಾಗಿ ಕಂಗಾಲಾಗಿದ್ದ ರೈತರು, ತಮ್ಮ ಜಾನುವಾರುಗಳನ್ನು ಕಷ್ಟದ ಸಮಯದಲ್ಲಿ ವ್ಯಾಪಾರಿಗಳಿಗೆ ಮಾರಲಾಗದೆ ಇನ್ನಷ್ಟು ನಷ್ಟ ಅನುಭವಿಸಿದರು.

ದೇಶಾದ್ಯಂತ ಹೈನೋದ್ಯಮ ಕುಸಿಯುವುದಕ್ಕೂ ಇದು ಕಾರಣವಾಯಿತು. ರೈತರು ಸಾಕಿ ಬೆಳೆಸಿದ ಹಸುವನ್ನು ಬಳಸಿಕೊಂಡು ನಕಲಿ ಗೋರಕ್ಷಕರು ದುಡ್ಡು ಮಾಡಿದರು. ಗೋಶಾಲೆಗಳ ಹೆಸರಿನಲ್ಲಿ ವಿವಿಧ ಮಠಗಳೂ ಸರಕಾರದ ಹಣವನ್ನು ನುಂಗಿ ಹಾಕಿದವು. ನಿಜವಾದ ಗೋರಕ್ಷಕರು ಬೀದಿ ಪಾಲಾದರು. ತಮ್ಮದೇ ದೇಶದ ಜನರನ್ನು ‘‘ನಿಮ್ಮ ಪೌರತ್ವ ಸಾಬೀತು ಮಾಡಿ’’ ಎಂದು ಇಂದಿರಾಗಾಂಧಿಯ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಯಾರೂ ಕೇಳಿರಲಿಲ್ಲ. ಅಸ್ಸಾಮಿನಲ್ಲಿ ಲಕ್ಷಾಂತರ ಜನರು ಪೌರತ್ವ ಸಾಬೀತು ಮಾಡಲಾಗದೆ, ಡಿಟೆನ್‌ಶನ್ ಕ್ಯಾಂಪ್‌ಗೆ ಸೇರಬೇಕಾಯಿತು. ಅನ್ನಾಹಾರವಿಲ್ಲದೆ ಹಲವರು ಆ ಕ್ಯಾಂಪಿನಲ್ಲಿ ಸಾಯಬೇಕಾಯಿತು. ಸಿಎಎ ಮೂಲಕ ಇಡೀ ದೇಶವನ್ನು ಮುಸ್ಲಿಮರು ಮತ್ತು ಮುಸ್ಲಿಮೇತರರು ಎಂದು ಒಡೆಯುವ ಪ್ರಯತ್ನ ನಡೆಯಿತು.

ಎನ್‌ಆರ್‌ಸಿಯನ್ನು ಜಾರಿಗೊಳಿಸಲು ಹೊರಟ ಗೃಹ ಸಚಿವರು, ದೇಶಕ್ಕೆ ಬೆಂಕಿ ಹಚಿದರು. ಸಿಎಎ ಕಾಯ್ದೆಯ ವಿರುದ್ಧ ಪ್ರತಿಭಟಿಸಿ ಬೀದಿಗಿಳಿದ ನೂರಾರು ವಿದ್ಯಾರ್ಥಿಗಳನ್ನು ಸರಕಾರ ಜೈಲಿಗೆ ತಳ್ಳಿತು. ಹಲವರು ಈ ಪ್ರತಿಭಟನೆಯಲ್ಲಿ ಪೊಲೀಸರ ಗುಂಡಿಗೆ ಆಹುತಿಯಾದರು. ತುರ್ತುಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಸ್ಥಿತಿ ಇಷ್ಟೊಂದು ದೈನೇಸಿಯಾಗಿರಲಿಲ್ಲ. ಸರಕಾರದ ವಿರುದ್ಧ ಮಾತನಾಡಿದ ಚಿಂತಕರನ್ನು, ಲೇಖಕರನ್ನು, ಸಾಮಾಜಿಕ ಕಾರ್ಯಕರ್ತರನ್ನು ‘ದೇಶದ್ರೋಹಿ’ಗಳೆಂಬ ಹಣೆಪಟ್ಟಿ ಕಟ್ಟಿ ಜೈಲಲ್ಲಿಡಲಾಗಿದೆ.ತೇಲ್ತುತುಂಬ್ಡೆ ಸೇರಿದಂತೆ ನೂರಾರು ದಲಿತ ಹೋರಾಟಗಾರರು, ಸಂಜೀವ್‌ಭಟ್‌ರಂತಹ ಮಾಜಿ ಪೊಲೀಸ್ ಅಧಿಕಾರಿಗಳು ಸರಕಾರದ ದಲಿತ ವಿರೋಧಿ ನೀತಿಯನ್ನು ಪ್ರತಿಭಟಿಸಿದರು ಎನ್ನುವ ಕಾರಣಕ್ಕಾಗಿಯೇ ಜೈಲಲ್ಲಿದ್ದಾರೆ.

ಸಂಸತ್ ದಾಳಿಯಲ್ಲಿ ಭಾಗವಹಿಸಿರುವ ಆರೋಪವಿರುವ ಭಯೋತ್ಪಾದಕನೊಬ್ಬನಿಗೆ ಇಲ್ಲಿ ಜಾಮೀನು ಸಿಗುತ್ತದೆ, ಆದರೆ ದೇಶದ ಪ್ರಜಾಸತ್ತೆಯ ಪರವಾಗಿ ಧ್ವನಿಯೆತ್ತಿದ ಈ ಹೋರಾಟಗಾರರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಪತ್ರಿಕೆಗಳೆಲ್ಲವೂ ಸರಕಾರದ ಪರವಾಗಿ ತುತ್ತೂರಿ ಊದುತ್ತಿವೆೆ. ್ನ ಸರಕಾರದ ಹಗರಣಗಳನ್ನು ಬಯಲಿಗೆಳೆದ ಪತ್ರಕರ್ತರಿಗೆ ತನಿಖಾ ಸಂಸ್ಥೆಗಳನ್ನು ಬಳಸಿ ಕಿರುಕುಳಗಳನ್ನು ನೀಡಲಾಗುತ್ತಿದೆ. ಇವೆಲ್ಲದರ ಬೆನ್ನಿಗೇ ದೇಶಾದ್ಯಂತ ಕೊರೋನ ಹೆಸರಲ್ಲಿ ಸರಕಾರ ಲಾಕ್‌ಡೌನ್ ಹೇರಿತು. ಈ ದೇಶದ ಅಭಿವೃದ್ಧಿಗೆ ಹೆಗಲು ಕೊಟ್ಟ ಸಹಸ್ರಾರು ವಲಸೆ ಕಾರ್ಮಿಕರು ಅನ್ನ, ಆಹಾರ, ವಸತಿಯಿಲ್ಲದೆ ಬೀದಿ ಪಾಲಾದರು. ನಗರದಲ್ಲೂ ಇರಲಾದರೆ, ತಮ್ಮ ಊರಿಗೂ ತಲುಪಲಾರದೆ ಚಿತ್ರಹಿಂಸೆ ಅನುಭವಿಸಿದರು. ತಮ್ಮದೇ ನೆಲದಲ್ಲಿ ಪರಕೀಯರಾದರು.

ಅಂದಿನ ಇಂದಿರಾಗಾಂಧಿ ಅಧಿಕೃತವಾಗಿ ತುರ್ತುಪರಿಸ್ಥಿತಿಯನ್ನು ಘೋಷಿಸಿದ್ದರು. ಆದರೆ ಇಂದು ಪ್ರಜಾಸತ್ತೆಯ ಮರೆಯಲ್ಲಿ ತುರ್ತುಪರಿಸ್ಥಿತಿಯ ದೇಶವನ್ನು ಆಳುತ್ತಿದೆ. ಮತ್ತು ಪ್ರಜಾಸತ್ತೆಯಪರವಾಗಿ ಮಾತನಾಡುವವರನ್ನು ನಿರಂಕುಶವಾಗಿ ದಮನಿಸಲಾಗುತ್ತಿದೆ. ಅಂದಿನ ತುರ್ತುಪರಿಸ್ಥಿತಿಗಿಂತಲೂ ಭೀಕರವಾಗಿದೆ ಇಂದಿನ ಅಘೋಷಿತ ತುರ್ತುಪರಿಸ್ಥಿತಿ. ಅಂದು ಅದರ ವಿರುದ್ಧ ಸಂಘಟಿತವಾಗಿ ಹೋರಾಡುವುದಕ್ಕೆ ಸ್ವಾತಂತ್ರ ಹೋರಾಟದ ಹಿನ್ನೆಲೆಯಿರುವ ನಾಯಕರು ನಮ್ಮ ಜೊತೆಗಿದ್ದರು. ಆದುದರಿಂದ ಮತ್ತೆ ಇಲ್ಲಿ ಪ್ರಜಾಸತ್ತೆ ಪುನರ್ ಸ್ಥಾಪನೆಗೊಂಡಿತು. ಆದರೆ ಇಂದು ಅಂತಹ ನಾಯಕರ ಕೊರತೆ ಈ ದೇಶವನ್ನು ಕಾಡುತ್ತಿದೆ. ಪ್ರಜಾಸತ್ತೆಯ ಮುಖವಾಡದಲ್ಲಿರುವ ತುರ್ತುಪರಿಸ್ಥಿತಿಯ ಈ ಕೇಡುಗಾಲವನ್ನು ಗುರುತಿಸಿ ಅದರ ವಿರುದ್ಧ ಧ್ವನಿಯೆತ್ತುವುದಕ್ಕೆ ಹಿಂದೇಟು ಹಾಕಿದರೆ, ಶೀಘ್ರದಲ್ಲೇ ಈ ದೇಶ, ಅಧಿಕೃತ ತುರ್ತುಪರಿಸ್ಥಿತಿ ಘೋಷಣೆಗೀಡಾಗಬಹುದು. ಬಾಣಲೆಯಿಂದ ಬೆಂಕಿಗೆ ಬೀಳುವ ಮೊದಲೇ ದೇಶ ಒಂದಾಗಿ, ಈ ಅಘೋಷಿತ ತುರ್ತುಪರಿಸ್ಥಿತಿಯನ್ನು ಎದುರಿಸಲು 1975ರ ಕಹಿ ನೆನಪು ನಮ್ಮನ್ನು ಬಡಿದೆಚ್ಚರಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News