ಹೈಕೋರ್ಟ್ ಆದೇಶದಲ್ಲಿನ ಉಲ್ಲೇಖಕ್ಕೆ ಜನವಾದಿ ಮಹಿಳಾ ಸಂಘಟನೆ ತೀವ್ರ ಕಳವಳ

Update: 2020-06-26 17:45 GMT

ಬೆಂಗಳೂರು, ಜೂ.26: ಅತ್ಯಾಚಾರ ಹಾಗೂ ಆಕ್ರಮಣವಾದಾಗ ಭಾರತೀಯ ಮಹಿಳೆಯರು ವರ್ತಿಸುವ ರೀತಿ ಇದಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸುವ ಮೂಲಕ ಹೈಕೋರ್ಟ್ ಅತ್ಯಾಚಾರ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದಕ್ಕೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯು ತೀವ್ರ ಕಳವಳ ವ್ಯಕ್ತಪಡಿಸಿದೆ.

ಇದೊಂದು ಅತ್ಯಾಚಾರದ ಪ್ರಕರಣವಾಗಿದ್ದರಿಂದ ಸೆಷನ್ಸ್ ಕೋರ್ಟ್ ಅತ್ಯಾಚಾರ ಆರೋಪಿಗೆ ನಿರೀಕ್ಷಣಾ ಜಾಮೀನಿನ ಅರ್ಜಿಯನ್ನು ವಜಾಗೊಳಿಸಿತ್ತು. ಈ ಪ್ರಕರಣದಲ್ಲಿ ಪೋಲಿಸರೂ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿಲ್ಲ. ಅದಾಗ್ಯೂ ಕರ್ನಾಟಕ ಹೈಕೋರ್ಟ್ ದೂರದಾರಳ ನಡತೆಯ ಬಗ್ಗೆ ಪೂರ್ವ ನಿರ್ಧಾರವನ್ನು ಪ್ರಕಟಿಸಿದೆ. ಹೀಗಾಗಿ, ರಾಜ್ಯ ಸರಕಾರ ನಿರೀಕ್ಷಣಾ ಜಾಮೀನಿನ ರದ್ದತಿಯನ್ನು ಕೋರಿ ಮೇಲ್ಮನವಿ ಸಲ್ಲಿಸಬೇಕು ಹಾಗೂ ನ್ಯಾಯಮೂರ್ತಿಗಳಿಗೆ ಪಾಳೆಗಾರಿಕೆಯ ಪಿತೃಪ್ರದಾನ ಮೌಲ್ಯಗಳು ಮತ್ತು ಭಾರತೀಯ ಮಹಿಳೆಯರು ಎದುರಿಸುವ ಹಿಂಸೆ, ದೌರ್ಜನ್ಯಗಳನ್ನು ಅರ್ಥಮಾಡಿಸುವ ಲಿಂಗ ಸಂವೇದನಾಶೀಲನೆಯನ್ನು ಮೈಗೂಡಿಸುವ ಕ್ರಮಕ್ಕೆ ಮುಂದಾಗಬೇಕೆಂದು ಜನವಾದಿ ಮಹಿಳಾ ಸಂಘನೆಯು ಒತ್ತಾಯಿಸಿದೆ.

ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂಬುದನ್ನು ನ್ಯಾಯಪೀಠವು ನಂಬುವುದಿಲ್ಲ ಎಂದಿದೆ. ಇನ್ನೂ ಆಘಾತಕಾರಿ ಸಂಗತಿ ಎಂದರೆ ಅತ್ಯಾಚಾರ ನಡೆದ ರಾತ್ರಿ ತಾನು ದಣಿದ ಮತ್ತು ನಿದ್ದಗೆ ಜಾರಿದ್ದ ಕಾರಣ ದೂರು ನೀಡಲು ಸಾಧ್ಯವಾಗಿಲ್ಲ ಎಂಬ ಸಂತ್ರಸ್ತೆಯ ಹೇಳಿಕೆಯನ್ನು ನ್ಯಾಯಪೀಠವು ಸಾರಾ ಸಗಟಾಗಿ ತಳ್ಳಿ ಹಾಕಿ, ಭಾರತೀಯ ಮಹಿಳೆಯರು ಪ್ರತಿಕ್ರಿಯಿಸುವ ರೀತಿ ಇದು ಅಲ್ಲ ಎಂದು ಹೇಳಿದೆ.

ನ್ಯಾಯಪೀಠವು ಪ್ರಕರಣವನ್ನು ತಪ್ಪಾಗಿ ಕಂಡಿದ್ದೂ ಅಲ್ಲದೇ ಆರೋಪಿಯು ಪ್ರಚೋದಿತನಾಗಿದ್ದಾಗ್ಯೂ ಮಹಿಳೆಯು ಆತನನ್ನು ತನ್ನೊಂದಿಗೆ ಬರಲು ಸಮ್ಮತಿಸಿದ್ದಾಳೆ ಎಂದು ಹೇಳಿ ಆರೋಪಿಗೆ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಮತ್ತೊಮ್ಮೆ ಮಹಿಳೆಯೇ ಅತ್ಯಾಚಾರಕ್ಕೆ ಆಸ್ಪದ ನೀಡಿದಳೆಂಬಂತೆ ನೋಡಲಾಗಿದೆ. ಇದು ಈ ಹಿಂದೆ ಬಲಿಯಾದವರನ್ನೇ ಬಲಿ ಹಾಕಿದ ಮಥುರಾ ಪ್ರಕರಣದಂತಹ ಪ್ರಕರಣವನ್ನೇ ಹೋಲುತ್ತಿದೆ ಎಂದು ಮಹಿಳಾ ಸಂಘಟನೆಯ ಅಧ್ಯಕ್ಷೆ ದೇವಿ, ಪ್ರಧಾನ ಕಾರ್ಯದರ್ಶಿ ಗೌರಮ್ಮ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News