×
Ad

ಅಕ್ರಮ ಬಂಧನ, ಹಲ್ಲೆ ಆರೋಪ: ಪೊಲೀಸ್ ಇನ್ಸ್ ಪೆಕ್ಟರ್, ಸಿಬ್ಬಂದಿ ವಿರುದ್ಧ ತನಿಖೆಗೆ ಸೂಚನೆ

Update: 2020-06-26 23:26 IST

ಮೈಸೂರು,ಜೂ.26: ವ್ಯಕ್ತಿಯೋರ್ವನನ್ನು ಅಕ್ರಮವಾಗಿ ಬಂಧಿಸಿ ಆತನ ಮೇಲೆ ಹಲ್ಲೆ ನಡೆಸಿರುವ ಆರೋಪದಡಿ ನಗರದ ಮಂಡಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್, ಸಿಬ್ಬಂದಿ ವಿರುದ್ಧ ಮೊಕದ್ದಮೆ ದಾಖಲಿಸಿ ತನಿಖೆ ನಡೆಸುವಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಸೂಚನೆ ನೀಡಿದೆ.

ಮೂರು ತಿಂಗಳ ಹಿಂದೆ ಮಂಡಿ ಪೊಲೀಸರು ಬನ್ನಿಮಂಟಪ ನಿವಾಸಿ ಮುತ್ತು ಎಂಬಾತನನ್ನು ಪ್ರಕರಣದ ವಿಚಾರಣೆಗೆಂದು ಕರೆದೊಯ್ದು ಬಳಿಕ ಬಿಡುಗಡೆ ಮಾಡಿದ್ದರು. ಈ ವೇಳೆ ಠಾಣೆಯಲ್ಲಿ ಇನ್ಸ್ ಪೆಕ್ಟರ್ ನಾರಾಯಣ ಸ್ವಾಮಿ ಹಾಗೂ ಸಿಬ್ಬಂದಿ ನನ್ನ ಪತಿ ಮೇಲೆ ಹಲ್ಲೆ ನಡೆಸಿ ಅವರ ಎರಡೂ ಕಿಡ್ನಿ ಹಾನಿಯಾಗುವಂತೆ ಮಾಡಿದ್ದಾರೆ ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಮುತ್ತು ಅವರ ಪತ್ನಿ ದೂರು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುತ್ತುವನ್ನು ಅಕ್ರಮವಾಗಿ ಬಂಧಿಸಿದ್ದ ಬಗ್ಗೆ ಆತನ ಪತ್ನಿಯನ್ನು ವಿಚಾರಣೆ ನಡೆಸಿದ್ದರು.

ಈ ವೇಳೆ ಅವನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಿದ್ದು ಅವರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಆತನ ಎರಡೂ ಕಿಡ್ನಿಗೆ ಹಾನಿಯಾಗಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮುತ್ತು ಕೊರಮ ಜಾತಿಯವರಾಗಿದ್ದು ಅವರ ಅನಾರೋಗ್ಯಕ್ಕೆ ಕಾರಣರಾದ ಮಂಡಿ ಠಾಣೆಯ ಇನ್ಸ್ ಪೆಕ್ಟರ್ ನಾರಾಯಣ ಸ್ವಾಮಿ, ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News