×
Ad

ಜೂ.28ರಿಂದ ಅಪರಾಹ್ನ 3ರ ಬಳಿಕ ಗುಂಡ್ಲುಪೇಟೆ ಪಟ್ಟಣ ಸ್ವಯಂಪ್ರೇರಿತ ಲಾಕ್‌ಡೌನ್

Update: 2020-06-27 15:37 IST

ಚಾಮರಾಜನಗರ, ಜೂ.27: ಗುಂಡ್ಲುಪೇಟೆ ತಾಲೂಕಿನಲ್ಲಿ ಕೊರೋನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜೂ.28ರಿಂದ ಅಪರಾಹ್ನ 3ರ ಬಳಿಕ ಗುಂಡ್ಲುಪೇಟೆ ಪಟ್ಟಣದಲ್ಲಿ ಸ್ವಯಂಪ್ರೇರಿತ ಲಾಕ್‌ಡೌನ್ ಮಾಡಲು ತೆಗೆದುಕೊಳ್ಳಲಾಗಿದೆ.

 ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಶಾಸಕ ನಿರಂಜನ್ ಕುಮಾರ್ ನೇತೃತ್ವದಲ್ಲಿ ನಡೆದ ಪಕ್ಷಾತೀತ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಯಿತು. ಇಂದುವರಗೂ ಗುಂಡ್ಲುಪೇಟೆ ತಾಲೂಕಿನಲ್ಲಿ18 ಪಾಸಿಟಿವ್ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕೊರೋನ ನಿಯಂತ್ರಣಕ್ಕೆ ಪೂರಕವಾಗಿ ತಾಲೂಕಿನ ಜನರ ಆರೋಗ್ಯದ ದೃಷ್ಟಿಯಿಂದ ಎಲ್ಲಾ ಪಕ್ಷದ ಮುಖಂಡರು ಹಾಗೂ ತಾಲೂಕಿನ ವ್ಯಾಪಾರಿಗಳು ಸೇರಿ ಒಕ್ಕೊರಿಲಿನಿಂದ ನಿರ್ಧಾರ ತೆಗೆದುಕೊಳ್ಳಲಾಯಿತು.

ಅದರಂತೆ ಪ್ರತಿನಿತ್ಯ ಬೆಳಗ್ಗೆ 6ರಿಂದ ಅಪರಾಹ್ನ 3 ರ ತನಕ ಮಾತ್ರ ವ್ಯಾಪಾರ ವಹಿವಾಟಿಗೆ ಅವಕಾಶವಿರುತ್ತದೆ. ಅಪರಾಹ್ನ 3ರಿಂದ ಮರುದಿನ ಬೆಳಗ್ಗೆ 6ರವರೆಗೆ ಪಟ್ಟಣ ಸಂಪೂರ್ಣ ಲಾಕ್‌ಡೌನ್ ಆಗಿರುತ್ತದೆ. ಅದಲ್ಲದೆ ಇನ್ನೂ ಮುಂದೆ ಪಟ್ಟಣದಲ್ಲಿ ಅಪರಾಹ್ನ 3ರ ನಂತರ ಅನಗತ್ಯ ಓಡಾಟ ನಿರ್ಬಂಧವಾಗಲಿದೆ. ಸದ್ಯ ಹೋಂ ಕ್ವಾರಂಟೈನ್ ಆಗಿರುವ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ಪೂರೈಸಲು ಸಭೆಯಲ್ಲಿ ನಿರ್ಧಾರ ಮಾಡಲಾಯಿತು.

ಗ್ರಾಮಾಂತರ ಪ್ರದೇಶದ ಜನರು ಅನಗತ್ಯವಾಗಿ ಪಟ್ಟಣ ಪ್ರದೇಶದಲ್ಲಿ ಓಡಾಟ ಮಾಡಬಾರದು ಎಂದು ಸೂಚಿಸಲಾಯಿತು.

ಈ ಸಂದರ್ಭ ತಾಪಂ ಅಧ್ಯಕ್ಷ ಮಧು ಶಂಕರ್, ಕಾಂಗ್ರೆಸ್ ಮುಖಂಡರಾದ ನಂಜಪ್ಪ, ಸುರೇಶ್ ಹಾಗೂ ರೈತ ಮುಖಂಡರಾದ ಕುಂದಕೆರೆ ಸಂಪತ್ತು, ಕಡಬೂರು ಮಂಜುನಾಥ್, ಮಾಡ್ರಹಳ್ಳಿ ಮಹದೇವಪ್ಪ ಹಾಗೂ ವಿವಿಧ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News