ಶರಾವತಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯಲು ಬಿಡುವುದಿಲ್ಲ: ಸಚಿವ ಕೆ.ಎಸ್. ಈಶ್ವರಪ್ಪ

Update: 2020-06-27 11:01 GMT

ಶಿವಮೊಗ್ಗ, ಜೂ.28: ಯಾವುದೇ ಕಾರಣಕ್ಕೂ ಶರಾವತಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಇದರ ಬಗ್ಗೆ ಪ್ರಶ್ನೆಯೇ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶರಾವತಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವುದು ಹುಚ್ಚು ದರ್ಬಾರ್ ಆಗುತ್ತೆ. ನೀರನ್ನು ಯಾವುದೇ ಕಾರಣಕ್ಕೂ ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ. ಈ ಬಗ್ಗೆ ಕೇಂದ್ರಕ್ಕೂ ಮನವಿ ಮಾಡಲು ಸದ್ಯದಲ್ಲಿಯೇ ತೀರ್ಮಾನ ತೆಗೆದು ಕೊಳ್ಳಲಿದ್ದೇವೆ ಎಂದರು.

ಯಾರೋ ಒಬ್ಬರು ಬಂದು ಹೆಲಿಕಾಪ್ಟರ್ ನಲ್ಲಿ ಹಾರಾಟ ನಡೆಸಿದರೆ ಅದಕ್ಕೆ ಸರ್ವೆ ಎನ್ನಲು ಸಾಧ್ಯವೇ. ಯಾರೋ ಒಬ್ಬರು ಸ್ಥಳಕ್ಕೆ ಬಂದು ನೋಡಿಕೊಂಡು ಹೋಗುತ್ತಾರೆ. ಆದರೆ, ಅದನ್ನು ಸರ್ವೆ ಎನ್ನಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಈಗಾಗಲೇ, ಸ್ಯಾಕ್ಷನ್ ಆಗಿರುವ ಯೋಜನೆಗಳು ಮತ್ತು ಕಾಮಗಾರಿಗಳನ್ನು ಕಡಿಮೆ ಮಾಡಿ ಈಗ ಕೇವಲ ಕೋವಿಡ್ ಬಗ್ಗೆ ಮಾತ್ರ ಗಮನ ಹರಿಸ ಲಾಗಿದೆ. ಯಾವುದೇ ಕಾರಣಕ್ಕೂ ಶರಾವತಿ ನೀರು ಬೆಂಗಳೂರಿಗೆ ಹೋಗುವುದಿಲ್ಲ ಎಂದು ಹೇಳಿದರು.

ಅಂಬುತೀರ್ಥ ಅಭಿವೃದ್ಧಿ: ತಲ ಕಾವೇರಿಯನ್ನು ಅಭಿವೃದ್ಧಿಪಡಿಸಿದ ಮಾದರಿಯಲ್ಲಿ ಶರಾವತಿ ಉಗಮ ಸ್ಥಾನ ಅಂಬುತೀರ್ಥವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು. ತೀರ್ಥಹಳ್ಳಿ ತಾಲೂಕಿನಲ್ಲಿರುವ ಅಂಬುತೀರ್ಥವನ್ನು ಸಮಗ್ರ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈಗಾಗಲೇ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿದ್ದು, ಅಭಿವೃದ್ಧಿ ಕಾಮ ಗಾರಿ ಗಳಿಗೆ ಅನುಮೋದನೆ ನೀಡಲಾಗಿದೆ. ಇಡೀ ನಾಡಿಗೆ ಬೆಳಕನ್ನು ನೀಡುತ್ತಿರುವ ಶರಾವತಿ ನದಿಯ ಉಗಮಸ್ಥಾನವಾದ ಅಂಬುತೀರ್ಥದಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಪಂಚಾಯತ್‌ರಾಜ್ ಇಲಾಖೆ, ಸಹ್ಯಾದ್ರಿ ಪರಂಪರೆ ಪ್ರಾಧಿಕಾರ, ತುಂಗಾ ಮೇಲ್ದಂಡೆ ನೀರಾವರಿ ಇಲಾಖೆ, ಮುಜರಾಯಿ ಇಲಾಖೆ ಸಹಯೋಗದಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ಅವರು ಹೇಳಿದರು.

ಪ್ರಥಮ ಹಂತದಲ್ಲಿ ಸುಮಾರು 10ರಿಂದ 15 ಕೋಟಿ ರೂ. ವೆಚ್ಚದಲ್ಲಿ ಪುಷ್ಕರಣಿ ನಿರ್ಮಾಣ, ಅಂಬುತೀರ್ಥ ಕೆರೆ ಸುತ್ತಲೂ ಬದು ಗೋಡೆ, ವಾಕಿಂಗ್ ಪಾಥ್, ನದಿಯ ಉಗಮದ ಹಿಂಭಾಗದಲ್ಲಿ ತಡೆಗೋಡೆ ನಿರ್ಮಾಣ, ಸಮುದಾಯ ಭವನ ನಿರ್ಮಾಣ, ನೊಣಬೂರು ವೃತ್ತದಿಂದ ಅಂಬುತೀರ್ಥ-ಅರಗಾ ರಸ್ತೆ ನಿರ್ಮಾಣ, ದೇವಾಲಯ ಬಹಳ ಪ್ರಾಚೀನವಾಗಿರುವ ಹಿನ್ನೆಲೆಯಲ್ಲಿ ಆಗಮ ಶಾಸ್ತ್ರದ ಪ್ರಕಾರ ಶಿಲಾ ದೇಗುಲ ಪುನರ್ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಅಭಿವೃದ್ಧಿ ಕಾಮಗಾರಿಗಳಿಗೆ ಜೂನ್ 28ರಂದು ಚಾಲನೆ ನೀಡಲಾಗುವುದು. ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮತ್ತಿತರ ಗಣ್ಯರು ಭಾಗವಹಿಸಲಿದ್ದು, ಶಾಸಕ ಅರಗ ಜ್ಞಾನೇಂದ್ರ ಅವರು ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

ಮೇಯರ್ ಸುವರ್ಣಾ ಶಂಕರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಅವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News