ವರ್ಷದೊಳಗೆ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ: ಸಿಎಂ ಯಡಿಯೂರಪ್ಪ

Update: 2020-06-27 13:25 GMT

ಬೆಂಗಳೂರು, ಜೂ. 27: ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡರ ಹೆಸರನ್ನು ಇತಿಹಾಸ ಪುಟದಲ್ಲಿ ಶಾಶ್ವತವಾಗಿ ಚಿರಸ್ಥಾಯಿಗೊಳಿಸುವ ನಿಟ್ಟಿನಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಹಾಗೂ ಉದ್ಯಾನವನ ಕಾಮಗಾರಿಗೆ ಭೂಮಿ ಪೂಜೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಮುದಾಯದ ಮಠಾಧೀಶರು, ಸಚಿವರು, ಶಾಸಕರು ವಿಧ್ಯುಕ್ತವಾಗಿ ನೆರವೇರಿಸಿದರು.

ಶನಿವಾರ ಇಲ್ಲಿನ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮತ್ತು ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಬೆಂಗಳೂರು ನಗರದ ವೈಜ್ಞಾನಿಕ ಅಭಿವೃದ್ಧಿಗೆ ಮುನ್ನುಡಿ ಬರೆದ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಹೆಸರನ್ನು ಇತಿಹಾಸ ಪುಟಗಳಲ್ಲಿ ಉಳಿಸಲು ಇನ್ನೂ ಒಂದು ಅಥವಾ ಒಂದೂವರೆ ವರ್ಷದಲ್ಲಿ 108 ಅಡಿ ಎತ್ತರದ ಕಂಚಿನ ಪುತ್ಥಳಿ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿ ಉದ್ಘಾಟಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.

ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಐಟಿ-ಬಿಟಿ ರಾಜಧಾನಿ ಎಂದು ಹೆಸರಾಗಿರುವ ಬೆಂಗಳೂರು, ಇಷ್ಟು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕೆಂಪೇಗೌಡರ ಕೊಡುಗೆ, ಅವರ ದೂರದೃಷ್ಟಿಯ ಆಡಳಿತ ವೈಖರಿಯೇ ಕಾರಣ. ಯಾವುದೇ ನದಿ ಮೂಲಗಳಿಲ್ಲದ ಬೆಂಗಳೂರು ನಗರಕ್ಕೆ ನೂರಾರು ಕೆರೆ-ಕುಂಟೆಗಳನ್ನು ನಿರ್ಮಿಸಿ ಇಲ್ಲಿಗೆ ಶಾಶ್ವತ ನೀರಿನ ಆಸರೆ ಕಲ್ಪಿಸಿದ ಚತುರ ಆಡಳಿತಗಾರ, ಕೆಂಪೇಗೌಡರು ಎಂದು ಯಡಿಯೂರಪ್ಪ ಬಣ್ಣಿಸಿದರು.

ಕೆಂಪೇಗೌಡರ ಆಡಳಿತದ ದೂರದೃಷ್ಟಿಯ ಫಲವಾಗಿ ಇಂದು ಉದ್ಯಾನನಗರಿ, ಸಿಲಿಕಾನ್ ಸಿಟಿ ಎಂಬ ಖ್ಯಾತಿ ಗಳಿಸಿರುವ ಬೆಂಗಳೂರು, ವೈಜ್ಞಾನಿಕ ರೀತಿಯಲ್ಲಿ ಅಭಿವೃದ್ಧಿ ಹೊಂದಿದೆ. ಬಹಳ ಹಿಂದೆಯೇ ಕೆಂಪೇಗೌಡರು ಜಾರಿಗೆ ತಂದ ಯೋಜನೆಗಳು ಇಂದಿನ ಆಡಳಿತಕ್ಕೆ ಮಾದರಿ ಎಂದು ಶ್ಲಾಘಿಸಿದ ಯಡಿಯೂರಪ್ಪ, ಅವರ ಹೆಸರನ್ನು ಇತಿಹಾಸದಲ್ಲಿ ಚಿರಸ್ಥಾಯಿಗೊಳಿಸಲು ನಾವೆಲ್ಲರೂ ಶ್ರಮಿಸಬೇಕಿದೆ ಎಂದು ಹೇಳಿದರು.

ಇಲ್ಲಿನ ಚಿಕ್ಕಪೇಟೆ, ಅಕ್ಕಿಪೇಟೆ, ಬಳೇಪೇಟೆ ಸೇರಿದಂತೆ ಅಂದು ಕೆಂಪೇಗೌಡರು ನಿರ್ಮಾಣ ಮಾಡಿದ ಪ್ರದೇಶಗಳೆಲ್ಲವೂ ಇಂದು ಬೆಂಗಳೂರು ಪ್ರಮುಖ ವಾಣಿಜ್ಯ ಕೇಂದ್ರಗಳಾಗಿವೆ. ಅವರ ಹೆಸರನ್ನು ಉಳಿಸಲು ರಾಜ್ಯ ಸರಕಾರ ಹಲವು ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೆ ಮುಂದಾಗಿದೆ ಎಂದ ಅವರು, ಕೆಂಪೇಗೌಡರ 511ನೆ ಜಯಂತಿ ಮಹೋತ್ಸವದ ಪ್ರಯುಕ್ತ ಇಂದು ಕೆಂಪೇಗೌಡರ ಪುತ್ಥಳಿ ಮತ್ತು ಅವರ ಇತಿಹಾಸ ಪರಿಚಯಿಸುವ ಥೀಮ್ ಪಾರ್ಕ್ ಸ್ಥಾಪನೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದು, ಮುಂದಿನ ಜಯಂತಿಯ ವೇಳೆಗೆ ಪ್ರತಿಮೆ ನಿರ್ಮಾಣ ಪೂರ್ಣಗೊಂಡ ಲೋಕಾರ್ಪಣೆಯಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಅಶ್ವಥ್ ನಾರಾಯಣ, ಸಚಿವರಾದ ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಬೈರತಿ ಬಸವರಾಜು, ಕೆ.ಗೋಪಾಲಯ್ಯ, ಶಾಸಕ ಎಸ್.ಆರ್.ವಿಶ್ವನಾಥ್, ನಿಸರ್ಗ ನಾರಾಯಣಸ್ವಾಮಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮಿ, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮಿ, ಸುತ್ತೂರು ಮಠದ ದೇಶಿಕೇಂದ್ರ ಸ್ವಾಮಿ, ವಿಶ್ವ ಒಕ್ಕಲಿಗ ಮಠದ ಚಂದ್ರಶೇಖರನಾಥ ಸ್ವಾಮಿ, ನಂಜಾವಧೂತ ಸ್ವಾಮಿ ಸೇರಿದಂತೆ ಇನ್ನಿತರರು ಹಾಜರಿದ್ದರು.

ನಮ್ಮ ಕಾಲದಲ್ಲೇ ಉದ್ಘಾಟನೆಯಾಗಲಿ

ಪಕ್ಷಬೇಧ ಮರೆತು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದು, ಈ ಕಾರ್ಯಕ್ಕೆ ಮುಂದಾದ ಎಲ್ಲರನ್ನು ನಾನು ಅಭಿನಂದಿಸುತ್ತೇನೆ ಮತ್ತು ಅಬಾರಿಯಾಗಿದ್ದೇನೆ. ಆದಷ್ಟು ಶೀಘ್ರವೇ ಕೆಂಪೇಗೌಡರ ಪ್ರತಿಮೆ ಮತ್ತು ಥೀಮ್ ಪಾರ್ಕ್ ಕಾಮಗಾರಿ ಪೂರ್ಣಗೊಳಿಸಿ ನಮ್ಮ ಅವಧಿಯಲ್ಲೇ ಉದ್ಘಾಟನೆಯಾಗಲಿ. ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿದ್ದು, ರಾಜ್ಯ ಸರಕಾರ ಕೈಗೊಂಡಿರುವ ನಿರ್ಧಾರ ನಿಜಕ್ಕೂ ಪ್ರಶಂಸನೀಯ.

-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ

ಸರಕಾರಕ್ಕೆ ಅಭಿನಂದನೆ

ಕೆಂಪೇಗೌಡರ ಅಭಿವೃದ್ಧಿ ಪರ್ವವನ್ನು ಇಂದು ವಿಶ್ವವೇ ನೋಡುವಂತಾಗಿದೆ. ಅಂದು ಅವರು ನಿರ್ಮಿಸಿದ ಬೆಂಗಳೂರು ಇಂದು ಜಗತ್ತಿನಲ್ಲೆ ಪ್ರಖ್ಯಾತಿ ಪಡೆದಿದ್ದು, ಇದಕ್ಕೆ ಅವರ ದೂರದೃಷ್ಟಿಯೇ ಕಾರಣ. ನಮ್ಮ ಸರಕಾರದ ಅವಧಿಯಲ್ಲಿ ಕೆಂಪೇಗೌಡರ ದಿನಾಚರಣೆಯನ್ನು ಸರಕಾರ ಜಯಂತಿ ಎಂದು ಘೋಷಿಸಲಾಗಿತ್ತು. ಬಿಎಸ್‍ವೈ ನೇತೃತ್ವದ ಸರಕಾರ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದು, ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ.

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ನಮ್ಮ ಸಂಕಲ್ಪ ಈಡೇರಿದೆ

ಈ ಹಿಂದೆ 2008ರಲ್ಲಿ ಯಡಿಯೂರಪ್ಪನವರು ಸಿಎಂ ಆಗಿದ್ದ ವೇಳೆ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ನಾಮಕರಣ ಮಾಡಲಾಗಿತ್ತು. ಇದೀಗ ವಿಮಾನ ನಿಲ್ದಾಣದಲ್ಲಿ ಅವರ 108 ಅಡಿ ಎತ್ತರ ಕಂಚಿನ ಪ್ರತಿಮೆ ಮತ್ತು ಥೀಮ್ ಪಾರ್ಕ್ ಕಾಮಗಾರಿಗೆ ಚಾಲನೆ ನೀಡಿದ್ದು, ಕೊಂಚ ವಿಳಂಬವಾದರೂ ನಮ್ಮ ಸಂಕಲ್ಪ ಈಡೇರಿದೆ. ಶೀಘ್ರದಲ್ಲೆ ಕೆಂಪೇಗೌಡರ ಪುತ್ಥಳಿ ನಿರ್ಮಿಸಿ ಲೋಕಾರ್ಪಣೆ ಮಾಡಲಾಗುವುದು'

-ಡಾ.ಅಶ್ವಥ್ ನಾರಾಯಣ, ಉಪಮುಖ್ಯಮಂತ್ರಿ

ಕೆಂಪೇಗೌಡರ ಆಳ್ವಿಕೆ ಮಾದರಿ

ವಿಶ್ವ ವಿಖ್ಯಾತಿ ಪಡೆದ ಇಂದಿನ ಬೆಂಗಳೂರು ನಗರ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಮತ್ತು ಜನಪರ ಕಾಳಜಿಯ ಕೊಡುಗೆ. ಅರಸನಿಗಿಂತ ಹೆಚ್ಚಾಗಿ ಜನರ ಸೇವಕನಾಗಿ ಅವರು ನಡೆಸಿದ ಆಳ್ವಿಕೆ ಎಲ್ಲ ಕಾಲದ ಆಡಳಿತಗಾರರಿಗೆ ಮಾದರಿ. ನಾಡಪ್ರಭುವಿಗೆ ಗೌರವದ ನಮನಗಳು'

-ಸಿದ್ದರಾಮಯ್ಯ ವಿಪಕ್ಷ ನಾಯಕ (ಟ್ವೀಟ್)

ನಾಡಿನ ಅಸ್ಮಿತೆಗೆ ನಮನಗಳು

ಪ್ರಜಾಹಿತಕ್ಕಾಗಿ ಕೆರೆ. ಕಟ್ಟೆ, ಪೇಟೆ ಪಟ್ಟಣಗಳನ್ನು ನಿರ್ಮಿಸಿ ನಮ್ಮ ಅಸ್ಮಿತೆ ಹಾಗೂ ನಮ್ಮ ನಾಡಿನ ಹೆಮ್ಮೆಯಾಗಿರುವ ಕೆಂಪೇಗೌಡರಿಗೆ ನನ್ನ ನಮನಗಳು. ನಾಡಿನ ಸಮಸ್ತ ಜನತೆಗೆ ಆಧುನಿಕ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತಿಯ ಶುಭಾಶಯಗಳು

-ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News