×
Ad

ವಿಜಯಪುರ: ಪರೀಕ್ಷಾ ಕೇಂದ್ರದ ಬಳಿ ಕುಸಿದು ಬಿದ್ದು ಯುವಕ ಮೃತ್ಯು

Update: 2020-06-27 18:39 IST

ವಿಜಯಪುರ, ಜೂ.27: ಎಸೆಸೆಲ್ಸಿ ಗಣಿತ ಪರೀಕ್ಷೆ ನಡೆಯುತ್ತಿದ್ದ ಪರೀಕ್ಷಾ ಕೇಂದ್ರದ ಬಳಿ ಕುಸಿದು ಬಿದ್ದು ಯುವಕನೊಬ್ಬ ಸಾವನ್ನಪ್ಪಿದ್ದು, ಪೊಲೀಸರ ಹಲ್ಲೆಯಿಂದ ಯುವಕ ಮೃತಪಟ್ಟಿದ್ದಾನೆ ಎಂದು ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿಯಲ್ಲಿ ಘಟನೆ ನಡೆದಿದೆ. ಸಾಗರ ಚಲವಾದಿ (19) ಮೃತ ಯುವಕ. 

ಇಂದಿನ ಎಸೆಸೆಲ್ಸಿ ಗಣಿತ ಪರೀಕ್ಷೆ ವೇಳೆ ಸಾಗರ ಚಲವಾದಿ ತನ್ನ ತಂಗಿಯನ್ನು ಪರೀಕ್ಷೆ ಕೇಂದ್ರಕ್ಕೆ ಬಿಡಲು ತೆರಳಿದ್ದಾನೆ. ಈ ಸಂದರ್ಭ ಪೊಲೀಸರು ಯುವಕನನ್ನು ಬೆನ್ನತ್ತಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಬೆನ್ನತ್ತಿದ ವೇಳೆ ಗಾಬರಿಗೊಂಡ ಯುವಕ ಓಡುತ್ತಲೇ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಹೂವಿನ ಹಿಪ್ಪರಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಅಲ್ಲಿಂದ ಬಸವನ ಬಾಗೇವಾಡಿ ತಾಲೂಕು ಆಸ್ಪತ್ರೆಗೆ ತಂದ ಬಳಿಕ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಯುವಕ ಪರೀಕ್ಷಾ ಕೇಂದ್ರದ ಬಳಿ ತೆರಳಿ ಕಾಪಿ ಚೀಟಿ ಕೊಡಲು ಹೋಗಿದ್ದ, ಈ ವೇಳೆ ಪೊಲೀಸರು ಹೊಡೆದು ಕಳಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಆದರೆ ಯುವಕನ ಪೋಷಕರು 'ಪೊಲೀಸರ ಹಲ್ಲೆಯಿಂದ ಯುವಕ ಮೃತಪಟ್ಟಿದ್ದಾನೆ' ಎಂದು ಆರೋಪಿಸಿದ್ದಾರೆ. ನಮ್ಮ ಮಗ ಕಾಪಿ ಚೀಟಿ ಕೊಡಲು ಹೋಗಿಲ್ಲ. ತಂಗಿಯನ್ನು ಪರೀಕ್ಷೆ ಕೇಂದ್ರಕ್ಕೆ ಬಿಡಲು ತೆರಳಿದ್ದಾನೆ. ಈ ವೇಳೆ ಪೊಲೀಸರು ಲಾಠಿಯಿಂದ ಹೊಡೆದಿದ್ದಾರೆ. ಹೀಗಾಗಿ ಆತ ಮೃತಪಟ್ಟಿದ್ದಾನೆ ಎಂದು ದೂರಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮಾ ಅಗರ್ವಾಲ್ ಭೇಟಿ ನೀಡಿದ್ದಾರೆ. ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಸಂಬಂಧ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ ಅಗರ್ವಾಲ್ ಪ್ರತಿಕ್ರಿಯೆ ನೀಡಿದ್ದು, 'ಮೃತಪಟ್ಟ ಯುವಕ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಎಂಬ ಮಾಹಿತಿ ಇದೆ. ಘಟನೆ ಸಂದರ್ಭದಲ್ಲಿ ಆತ ಗಾಬರಿಯಾಗಿ ಬಿದ್ದಿದ್ದರಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ. ಮರಣೋತ್ತರ ಪರೀಕ್ಷೆಯ ಬಳಿಕ ಸ್ಪಷ್ಟ ಮಾಹಿತಿ ಗೊತ್ತಾಗಲಿದೆ' ಎಂದು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News