ಕೊರೋನ ಸೋಂಕು ಸಮುದಾಯಕ್ಕೆ ಹರಡಿಲ್ಲ: ಸಚಿವ ಶ್ರೀರಾಮುಲು
ಬಳ್ಳಾರಿ, ಜೂ. 27: ಮಾರಕ ಕೊರೋನ ಸೋಂಕು ಇನ್ನೂ ಸಮುದಾಯಕ್ಕೆ ಹರಡಿಲ್ಲ. ಎರಡನೆ ಹಂತದಿಂದ ಮೂರನೆ ಹಂತಕ್ಕೆ ತಲುಪುತ್ತಿದ್ದು, ಅದನ್ನು ನಿಯಂತ್ರಿಸಲು ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಮುದಾಯದಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂಬ ಕಾರಣಕ್ಕೆ ರೈತರು, ಕಾರ್ಮಿಕರು, ವಲಸಿಗರು ಸೇರಿದಂತೆ ಹತ್ತು ವಿವಿಧ ವಲಯಗಳಲ್ಲಿ ರ‍್ಯಾಂಡಮ್ ಪರೀಕ್ಷೆ ನಡೆಸಲಾಗಿದೆ. ಈ ವರದಿಯನ್ವಯ ಕೊರೋನ ಸೋಂಕು ಇನ್ನು ಸಮುದಾಯಕ್ಕೆ ತಲುಪಿಲ್ಲ ಎಂದರು.
ಸಮುದಾಯಕ್ಕೆ ಹಂತಕ್ಕೆ ಸೋಂಕು ಹೋಗುವ ಸಾಧ್ಯತೆ ಹಿನ್ನೆಲೆಯಲ್ಲಿ ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದು, ಸೋಂಕು ತಡೆಗೆ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಸೋಂಕಿನ ಲಕ್ಷಣ ಇರುವವರನ್ನು ಕೋವಿಡ್ ಆಸ್ಪತ್ರೆಗಳಲ್ಲಿ, ಯಾವುದೇ ಗುಣ ಲಕ್ಷಣ ಇಲ್ಲದ ಸೋಂಕಿತರನ್ನು ಇತರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಸೋಂಕು ತಡೆಗಟ್ಟಲು ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು. ಸ್ಯಾನಿಟೈಸರ್ ಬಳಕೆ ಮಾಡಬೇಕು. ಅಗತ್ಯವಿದ್ದರಷ್ಟೆ ಹೊರಗೆ ಸಂಚರಿಸಬೇಕು. ಪ್ರತಿಯೊಬ್ಬರೂ ಸರಕಾರದ ಮಾರ್ಗಸೂಚಿಗಳನ್ನು ಕಟ್ಟಿನಿಟ್ಟಾಗಿ ಪಾಲಿಸಬೇಕು ಎಂದ ಅವರು, ಜಿಂದಾಲ್ ಕಾರ್ಖಾನೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಬಗ್ಗೆ ಸಿಎಂ ಗಮನಕ್ಕೆ ತರಲಾಗಿದೆ ಎಂದರು.
ಈಗಾಗಲೇ ಕಾರ್ಖಾನೆಯ ಆಡಳಿತ ಮಂಡಳಿಯಿಂದ ವರದಿ ಕೇಳಿದ್ದು, ವರದಿ ಬಂದ ಬಳಿಕ ಬಳ್ಳಾರಿ ನಗರದಲ್ಲಿ ಸೋಂಕು ಹರಡಲು ಕಾರಣ ಎನೆಂದು ತಿಳಿದು ಕೊಳ್ಳುತ್ತೇವೆ. ಅನಂತರ ಜಿಂದಾಲ್ ಕಾರ್ಖಾನೆ ಲಾಕ್‍ಡೌನ್ ಮಾಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಶ್ರೀರಾಮುಲು ಸ್ಪಷ್ಟನೆ ನೀಡಿದರು.