ರಾಜ್ಯಾದ್ಯಂತ ಜುಲೈ 5ರಿಂದ ಎಲ್ಲಾ ರವಿವಾರ ಲಾಕ್‍ಡೌನ್‍: ಪ್ರತಿದಿನ ರಾತ್ರಿ 8ರಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ

Update: 2020-06-27 15:39 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ. 27: ಮಾರಕ ಕೊರೋನ ಸೋಂಕು ನಿಯಂತ್ರಣಕ್ಕೆ ಜುಲೈ 5ರಿಂದ ಪ್ರತಿ ರವಿವಾರ ರಾಜ್ಯಾದ್ಯಂತ ಲಾಕ್‍ಡೌನ್ ಮಾಡಲಾಗುವುದು. ಪ್ರತಿದಿನ ರಾತ್ರಿ 9 ರಿಂದ ಬೆಳಗ್ಗೆ 5ರ ವರೆಗೆ ಇರುವ ಕರ್ಫ್ಯೂ ಅವಧಿಯನ್ನು ರಾತ್ರಿ 8ರಿಂದ 5 ಗಂಟೆಯವರೆಗೆ ಕರ್ಫ್ಯೂ ಅವಧಿ ಬದಲಾವಣೆ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಶನಿವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವ ಆರ್.ಅಶೋಕ್, ಜುಲೈ 10ರಿಂದ ಒಂದು ತಿಂಗಳ ಕಾಲ ರಜೆ ಇರುವ ಎರಡನೆ ಮತ್ತು ನಾಲ್ಕನೆ ಶನಿವಾರದ ಜೊತೆಗೆ ಉಳಿದ ಶನಿವಾರವೂ ಸರಕಾರಿ ಹಾಗೂ ಸರಕಾರಿ ಸ್ವಾಮ್ಯದ ಎಲ್ಲ ಕಚೇರಿಗಳಿಗೆ ರಜೆ ಘೋಷಿಸಲು ನಿರ್ಧರಿಸಲಾಗಿದೆ ಎಂದರು.

ಬೆಂಗಳೂರು ನಗರದಲ್ಲಿ ಬೃಹತ್ ಹೋಲ್‍ಸೇಲ್ ತರಕಾರಿ ಮಾರುಕಟ್ಟೆಗಳಲ್ಲಿ ಆಗುವ ಜನದಟ್ಟಣೆ ತಪ್ಪಿಸಲು ಹೆಚ್ಚಿನ ಹೋಲ್‍ಸೇಲ್ ತರಕಾರಿ ಮಾರುಕಟ್ಟೆಗಳನ್ನು ತೆರೆಯಲು ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಕೋವಿಡ್ ಸೋಂಕಿತರಿಗೆ ಶೀಘ್ರವಾಗಿ ಕೋವಿಡ್ ಆಸ್ಪತ್ರೆಗಳಿಗೆ ಸೇರಿಸಲು ತಂತ್ರಾಂಶದ ಮೂಲಕ ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದರು.

ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಗಳನ್ನು ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ಗಳ ಸಂಖ್ಯೆಯನ್ನು 250ಕ್ಕೆ ಹೆಚ್ಚಿಸಲಾಗುವುದು. ಮೃತದೇಹಗಳನ್ನು ಸಾಗಿಸಲು ಪ್ರತ್ಯೇಕ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗುವುದು. ಆಂಬುಲೆನ್ಸ್ ಇರುವ ಸ್ಥಳಗಳನ್ನು ಗುರುತಿಸಲು ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿನ ವೈಯರ್ ಲೆಸ್ ಸೇವೆಯನ್ನು ಬಳಸಿಕೊಳ್ಳಲಾಗುವುದು ಎಂದರು.

ಕೋವಿಡ್ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ನೋಡಲ್ ಅಧಿಕಾರಿಗಳ ವಿವರ ಪತ್ರಿಕೆಗಳ ಜಾಹೀರಾತು ಮೂಲಕ ಸಾರ್ವಜನಿಕರಿಗೆ ಪ್ರಚುರಪಡಿಸಲು ಕ್ರಮ ವಹಿಸಲಾಗುವುದು. ಬಿಬಿಎಂಪಿ ಕೇಂದ್ರ ಕಚೇರಿ ಹಾಗೂ ಆಯುಕ್ತರ ಮೇಲೆ ಇರುವ ಕೆಲಸದ ಒತ್ತಡ ಕಡಿಮೆ ಮಾಡಲು ಪಾಲಿಕೆ ಎಂಟು ವಲಯಗಳ ಜಂಟಿ ಆಯುಕ್ತರಿಗೆ ಹೆಚ್ಚಿನ ಜವಾಬ್ದಾರಿ ಹಾಗೂ ಕೆಲಸಗಳನ್ನು ನೀಡಲು ಅವರೊಂದಿಗೆ ಕೆಎಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಲು ತೀರ್ಮಾನಿಸಲಾಗಿದೆ.

ವೈದ್ಯರ ಕೊರತೆ ನೀಗಿಸಲು ಕಾರ್ಮಿಕ ಇಲಾಖೆಯಿಂದ ನೇಮಕವಾಗಿರುವ 180 ಎಎಸ್‍ಐ ವೈದ್ಯರನ್ನು ಕೋವಿಡ್ ಕರ್ತವ್ಯಕ್ಕೆ ಬಳಸಿಕೊಳ್ಳಲು ಮತ್ತು ಪರೀಕ್ಷಾರ್ತಿ ತಹಶೀಲ್ದಾರ್ ಗಳನ್ನು ಕೋವಿಡ್ ಆಸ್ಪತ್ರೆಗಳ ಕೇರ್ ಸೆಂಟರ್ ಗೆ ನೋಡಲ್ ಅಧಿಕಾರಿಗಳನ್ನು ಹಾಕಲು ಸೂಚಿಸಲಾಗಿದೆ. ಬೆಂಗಳೂರು ನಗರದಲ್ಲಿ ಲಭ್ಯವಿರುವ ಕಲ್ಯಾಣ ಮಂಟಪಗಳು, ಹಾಸ್ಟೆಲ್ ಸೇರಿ ಇನ್ನಿತರ ಸಂಸ್ಥೆಗಳನ್ನು ಕೋವಿಡ್ ಕೇರ್ ಸೆಂಟರ್ ಗಳಿಗೆ ಮೀಸಲಿಡಲು ಹಾಗೂ ರೈಲ್ವೆ ಇಲಾಖೆ ಬೆಡ್‍ಗಳ ಕೋಚ್‍ ಗಳನ್ನು ಪಡೆಯಲು ಅವಶ್ಯಕ ಕ್ರಮ ವಹಿಸಲು ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಕೋವಿಡ್ ಸೋಂಕಿನಿಂದ ಮೃತಪಟ್ಟವರ ಮೃತದೇಹಗಳ ಅಂತ್ಯಕ್ರಿಯೆ ಜರುಗಿಸಲು ಪ್ರತ್ಯೇಕ ತಂಡಗಳನ್ನು ರಚಿಸುವುದು ಹಾಗೂ ದೇಹಗಳ ಅಂತ್ಯಕ್ರಿಯೆಯ ಸಲುವಾಗಿ ಇನ್ನೂ ಹೆಚ್ಚಿನ ಜಾಗಗಳನ್ನು ಗುರುತಿಸಲು ಬೆಂಗಳೂರು ನಗರದ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ವೈದ್ಯಕೀಯ ಕಾಲೇಜುಗಳ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳ ಪೈಕಿ ಶೇ.50ರಷ್ಟು ಕೋವಿಡ್ ಸೋಂಕಿತರಿಗೆ ಮೀಸಲಿಡಲು ಸೂಚಿಸಲಾಗಿದೆ ಎ.

ಆಸ್ಪತ್ರೆಗಳ ಹಾಸಿಗೆಗಳ ಭರ್ತಿಯಾದ ಬಳಿಕ ಹೊಟೇಲ್‍ಗಳಲ್ಲಿನ ಕೊಠಡಿಗಳಲ್ಲಿ ಚಿಕಿತ್ಸೆಗೆ ಬಳಸಿಕೊಳ್ಳಲು ಉದ್ದೇಶಿಸಿದ್ದು, ಹೊಟೇಲ್‍ಗಳನ್ನು ಆಸ್ಪತ್ರೆ ಕೊಠಡಿಗಳನ್ನಾಗಿ ಬದಲಾಯಿಸಲು ಕ್ರಮ ವಹಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News