×
Ad

ಮದ್ಯದ ಮಳಿಗೆ ತೆರೆಯಲು ಅನುಮತಿ ನೀಡುವಂತೆ ಶಿಫಾರಸು: ಸಚಿವ ಚೌಹಾಣ್‍ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ

Update: 2020-06-27 23:50 IST

ಬೆಂಗಳೂರು, ಜೂ.27:  ಪಶು ಸಂಗೋಪನಾ ಇಲಾಖೆಯ ಸಚಿವ ಪ್ರಭು ಚೌಹಾಣ್ ಅವರು ತಮ್ಮ ಕ್ಷೇತ್ರದ ವ್ಯಕ್ತಿಯೊಬ್ಬರಿಗೆ ಮದ್ಯದ ಮಳಿಗೆ ತೆರೆಯಲು ಅನುಮತಿ ನೀಡುವಂತೆ ಎಂಎಸ್‍ಐಎಲ್‍ಗೆ ಶಿಫಾರಸು ಮಾಡಿದ್ದಕ್ಕೆ ರಾಜ್ಯ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ವಿಧಾನಸಭಾ ಕ್ಷೇತ್ರದ ಅನುಸಾರವಾಗಿ ಕೋಟಾದಡಿ ಮದ್ಯದಂಗಡಿ ತೆರೆಯಲು ಎಂಎಸ್‍ಐಎಲ್‍ಗೆ ಲೈಸೆನ್ಸ್ ನೀಡುವ ಸಂಬಂಧ 2016ರಲ್ಲಿ ರಾಜ್ಯ ಸರಕಾರ ಹೊರಡಿಸಿರುವ ಅಧಿಸೂಚನೆ ರದ್ದು ಕೋರಿ ಬೀದರ್ ನ ಸೋಮನಾಥ ಎಂಬುವರು ಸಲ್ಲಿಸಿರುವ ಪಿಐಎಲ್ ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯಿತು. ಅರ್ಜಿದಾರರ ಪರ ವಾದಿಸಿದ ವಕೀಲರು,  ಸಚಿವರು ತಮ್ಮ ಕ್ಷೇತ್ರದ ಬಾಲಾಜಿ ಎಂಬುವರಿಗೆ ಔರಾದ್ ತಾಲೂಕಿನ ಮುಧೋಳ ಗ್ರಾಮದಲ್ಲಿ ಎಂಎಸ್‍ಐಎಲ್‍ಗೆ ಮಳಿಗೆ ತೆರೆಯಲು ಅನುಮತಿ ನೀಡುವಂತೆ ಶಿಫಾರಸು ಮಾಡಿದ್ದಾರೆ.

ಈತನ ಸೋದರರಾದ ಸಂತೋಷ್ ಮತ್ತು ಸುನೀಲ್ ಎಂಬುವರಿಗೆ ಈ ಮಳಿಗೆಯಲ್ಲಿ ಕೆಲಸ ಮಾಡಲು ಅನುಕೂಲವಾಗುವಂತೆ ಆದೇಶ ಹೊರಡಿಸಲು ಸೂಚಿಸಿ ಎಂಎಸ್‍ಐಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ ಎಂದು 2019ರ ಡಿ.19ರಂದು ಬರೆದ ಪತ್ರವನ್ನು ಪೀಠಕ್ಕೆ ಸಲ್ಲಿಸಿದರು. ಶಿಫಾರಸು ಪತ್ರ ಗಮನಿಸಿದ ಪೀಠ ಸಚಿವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಸಚಿವರು ಮಾಡುವ ಕೆಲಸ ಇದಲ್ಲ. ಇಂತಹ ಬೆಳವಣಿಗೆ ಒಳ್ಳೆಯದಲ್ಲ. ಇದು ಅಧಿಕಾರದ ದುರುಪಯೋಗ. ಹೀಗಾಗಿ ಪ್ರಕರಣದಲ್ಲಿ ಸಚಿವರನ್ನು ಪ್ರತಿವಾದಿಯನ್ನಾಗಿ ಸೇರಿಸಿ ಎಂದು ಅರ್ಜಿದಾರರಿಗೆ ಸೂಚಿಸಿತು. ನಂತರ ರಾಜ್ಯ ಸರಕಾರ, ಅಬಕಾರಿ ಆಯುಕ್ತರು, ಬೀದರ್ ಜಿಲ್ಲಾಧಿಕಾರಿ, ಜಿಲ್ಲಾ ಅಬಕಾರಿ ಆಯುಕ್ತ, ಎಂಎಸ್‍ಐಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಇದೇ 22ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News