ಹೋಮ್ ಕ್ವಾರಂಟೈನ್‍ನಲ್ಲಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆದಿಲ್ಲ: ಸುರೇಶ್ ಕುಮಾರ್ ಸ್ಪಷ್ಟನೆ

Update: 2020-06-28 13:49 GMT

ಬೆಂಗಳೂರು, ಜೂ.28: ಎಸೆಸೆಲ್ಸಿ ಪರೀಕ್ಷೆ ಬರೆದ 25 ವಿದ್ಯಾರ್ಥಿಗಳಿಗೆ ಸೋಂಕು, ಒಟ್ಟು 57 ವಿದ್ಯಾರ್ಥಿಗಳನ್ನು ಹೋಮ್ ಕ್ವಾರಂಟೈನ್‍ನಲ್ಲಿ ಇಡಲಾಗಿದೆ ಎಂಬ ಸುದ್ದಿ ಇಂದು ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿರುವುದನ್ನು ಗಮನಿಸಿದ್ದೇನೆ. ಆದರೆ, ರಾಜ್ಯದಾದ್ಯಂತ ಹೋಮ್ ಕ್ವಾರೆಂಟೈನ್‍ನಲ್ಲಿ ಈಗಾಗಲೇ ಪರೀಕ್ಷೆ ಪ್ರಾರಂಭವಾಗುವ ಮುನ್ನವೇ 57 ವಿದ್ಯಾರ್ಥಿಗಳಿದ್ದರು. ಅವರು ಪರೀಕ್ಷೆ ಬರೆಯಲು ಬಂದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಅದೇ ರೀತಿ ಕೋವಿಡ್ ಪಾಸಿಟೀವ್ ಎಂದು 25 ವಿದ್ಯಾರ್ಥಿಗಳೂ ಸಹ ಪರೀಕ್ಷೆಯ ಮುಂಚಿನಿಂದಲೇ ಗುರುತಿಸಲ್ಪಟ್ಟವರು. ಅವರೂ ಸಹ ಒಂದು ಪರೀಕ್ಷೆಗೂ ಬಂದಿಲ್ಲ. ಈ ವಿದ್ಯಾರ್ಥಿಗಳಿಗೆ ಮುಂದಿನ ಪೂರಕ ಪರೀಕ್ಷೆಗಳಲ್ಲಿ ಕುಳಿತುಕೊಳ್ಳುವ ಅವಕಾಶ ನೀಡಲಾಗುವುದು. ಮತ್ತು ಅವರನ್ನು ‘ಫ್ರೆಶ್ ಕ್ಯಾಂಡಿಡೇಟ್ಸ್’ ಎಂದೇ ಪರಿಗಣಿಸಲಾಗಿಸಲಾಗುವುದು. ಇವರು ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಪರೀಕ್ಷಾ ಕೇಂದ್ರವೊಂದರಲ್ಲಿ ನಿನ್ನೆ ಪರೀಕ್ಷೆಗೆ ಒಬ್ಬ ವಿದ್ಯಾರ್ಥಿ  ಹಾಜರಾಗಿದ್ದ. ಅವನು ಬಂದಾಗ ಸೋಂಕಿನ ಯಾವುದೇ ಲಕ್ಷಣ ಇರಲಿಲ್ಲ. ಆದರೆ ಈ ಮೊದಲು ಆತ ಡೆಂಗ್ ಜ್ವರದ ತಪಾಸಣೆಗೊಳಗಾಗಿದ್ದ. ಆ ಸಂದರ್ಭದಲ್ಲಿ ಅವನ ಕೊರೋನ ಸ್ಯಾಂಪಲ್ ಪಡೆಯಲಾಗಿದ್ದು, ಇಂದು ಅವನು ಪರೀಕ್ಷೆ ಬರೆಯುತ್ತಿದ್ದಾಗ ಪರೀಕ್ಷಾ ಕೇಂದ್ರದಲ್ಲಿಯೆ ಸ್ವೀಕೃತವಾದ ವೈದ್ಯಕೀಯ ವರದಿಯಲ್ಲಿ ಸೋಂಕು ಧೃಡ ಪಟ್ಟಿದ್ದು ಕೂಡಲೇ ಆ ವಿದ್ಯಾರ್ಥಿಯನ್ನು ಪ್ರತ್ಯೇಕ ಕೊಠಡಿಗೆ ಸ್ಥಳಾಂತರಿಸಲಾಯಿತು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಆತನ ಜೊತೆ ಆ ಕೊಠಡಿಯಲ್ಲಿ ಪರೀಕ್ಷೆ ಬರೆಯುತ್ತಿದ್ದ ಇತರೆ 19 ವಿದ್ಯಾರ್ಥಿಗಳನ್ನು ಸಹ ಆರೋಗ್ಯ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ಅವರ ಫಲಿತಾಂಶ ದೊರಕಲಿದೆ. ಆರೋಗ್ಯ ಇಲಾಖೆಯ ಅಭಿಪ್ರಾಯ ಮೇರೆಗೆ ಈ ವಿದ್ಯಾರ್ಥಿಗಳಿಗೆ ಮುಂದಿನ ಪರೀಕ್ಷೆ ಗಳ ಕುರಿತು ನಿರ್ಧರಿಸಲಾಗುತ್ತದೆ. ಆ ಎಲ್ಲ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆಯ ಕ್ರಮ ವಹಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ನಿನ್ನೆ ಇಡೀ ರಾಜ್ಯದಲ್ಲಿ ಗಣಿತ ಪರೀಕ್ಷೆಗೆ ಶೇ.97.93ರಷ್ಟು ಮಕ್ಕಳು ಹಾಜರಾಗಿದ್ದರು. (8,08,650 ವಿದ್ಯಾರ್ಥಿಗಳ ಪೈಕಿ 7,91,987 ಮಕ್ಕಳು ಹಾಜರಾಗಿ ಉತ್ತರ ಬರೆದಿದ್ದಾರೆ). ಪರೀಕ್ಷಾ ಕೇಂದ್ರದಿಂದ ಹೊರಬಂದಾಗ ಅವರೆಲ್ಲರ ಮುಖದಲ್ಲಿ ಗೆಲುವು ಇದ್ದದ್ದನ್ನು ಎಲ್ಲ ಪೋಷಕರು ಗಮನಿಸಿ ಆನಂದ ಪಟ್ಟಿದ್ದಾರೆ ಎಂದು ಸುರೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News