ಎಸೆಸೆಲ್ಸಿ ಪರೀಕ್ಷೆ ನಿರಾತಂಕವಾಗಿ ನಡೆಯಲಿದೆ: ಸಚಿವ ಸುರೇಶ್‍ ಕುಮಾರ್ ಸ್ಪಷ್ಟನೆ

Update: 2020-06-28 15:11 GMT

ಬೆಂಗಳೂರು, ಜೂ.28: ಆರೋಗ್ಯ ಇಲಾಖೆ ನಡೆಸುವ ರ‍್ಯಾಂಡಮ್ ಟೆಸ್ಟ್ ನಲ್ಲಿ ಕೋವಿಡ್ ಸೋಂಕು ಹರಡಿರುವುದು ದೃಢಪಟ್ಟಲ್ಲಿ ಅಂತಹ ವಿದ್ಯಾರ್ಥಿಯ ಸುತ್ತಮುತ್ತ ಕುಳಿತು ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಬಾಕಿ ಉಳಿದ ಪರೀಕ್ಷೆಗಳನ್ನು ಬರೆಯಲು ಅವಕಾಶ ನೀಡಬಹುದೇ ಎಂಬ ಬಗ್ಗೆ ಆರೋಗ್ಯ ಇಲಾಖೆಯ ಸ್ಪಷ್ಟೀಕರಣ ಪಡೆದುಕೊಂಡೇ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಪರೀಕ್ಷೆಗಳು ನಿರಾತಂಕವಾಗಿ ನಡೆಯಲಿವೆ ಎಂದು ಶಿಕ್ಷಣ ಸಚಿವ ಸುರೇಶ್‍ ಕುಮಾರ್ ಹೇಳಿದ್ದಾರೆ.

ಈಗಾಗಲೇ ರಾಜ್ಯಾದ್ಯಾಂತ ಕೋವಿಡ್ ಸೋಂಕು ಹೊಂದಿದ 25 ವಿದ್ಯಾರ್ಥಿಗಳನ್ನು ಆರೋಗ್ಯ ಇಲಾಖೆ ಗುರುತಿಸಿದ್ದು, ಪ್ರಸ್ತುತ ನಡೆಯುತ್ತಿರುವ ಎಸೆಸೆಲ್ಸಿ ಪರೀಕ್ಷೆಗಳನ್ನು ಬರೆಯಲು ಇವರೆಲ್ಲರಿಗೆ ವಿನಾಯಿತಿ ನೀಡಲಾಗಿದೆ. ಆದರೆ ಯಾವುದೇ ರೋಗ ಲಕ್ಷಣಗಳಲ್ಲಿದ ವಿದ್ಯಾರ್ಥಿಗಳಿಗೆ ರ‍್ಯಾಂಡಮ್ ಟೆಸ್ಟ್ ನಲ್ಲಿ ಸೋಂಕು ಹರಡುವುದು ದೃಢಪಟ್ಟರೆ ಅವರ ಪಕ್ಕ ಕುಳಿತು ಪರೀಕ್ಷೆ ಬರೆಯುವ ಬಗ್ಗೆ ಸ್ಪಷ್ಟೀಕರಣ ಕೋರಲಾಗಿತ್ತು. ಈ ಹಿನ್ನೆಲೆಯಲ್ಲಿ, ಪರೀಕ್ಷಾ ಸಂದರ್ಭದಲ್ಲಿ ಯಾವುದೇ ವಿದ್ಯಾರ್ಥಿಗೂ ಕೋವಿಡ್ 19 ಸೋಂಕು ದೃಢಪಟ್ಟಿದ್ದಲ್ಲಿ ಆರೋಗ್ಯ ಇಲಾಖೆಯ ಸಲಹೆಯ ಮೇರೆಗೆ ಆತ ಅಥವಾ ಆಕೆಯ ಜೊತೆ ಪರೀಕ್ಷೆ ಬರೆದಿದ್ದ ಇತರೆ ವಿದ್ಯಾರ್ಥಿಗಳಿಗೆ ಎಂದಿನಂತೆ ಸುರಕ್ಷಿತವಾಗಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರತಿ ಡೆಸ್ಕ್ ನಲ್ಲಿ ಒಬ್ಬ ವಿದ್ಯಾರ್ಥಿ ಹಾಗೂ ಡೆಸ್ಕ್ ಗಳ ನಡುವೆ ಆರು ಅಡಿ ಅಂತರವಿರುವಂತೆ ಕ್ರಮ ವಹಿಸಿ ಅಂತಹ ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲು ಅಧಿಕಾರಿಗಳಿಗೆ ತಾವು ನಿರ್ದೇಶನ ನೀಡಿರುವುದಾಗಿ ಸಚಿವ ಸುರೇಶ್‍ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಶಿಕ್ಷಣ ಇಲಾಖೆ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆಯನ್ನು ಬರೆಯುವ ವಾತಾವರಣವನ್ನು ಕಲ್ಪಿಸಿದ್ದು ಯಾವುದೇ ವಿದ್ಯಾರ್ಥಿಗಳು ವಿಚಲಿತಗೊಳ್ಳದೇ ಇಂತಹ ಸಂದರ್ಭದಲ್ಲಿ ಕೇವಲ ತಮ್ಮ ಓದಿನ ಬಗ್ಗೆ ಮನಸ್ಸನ್ನು ಕೇಂದ್ರೀಕರಿಸಬೇಕೆಂದು, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕೆಂದು ವಿದ್ಯಾರ್ಥಿಗಳಿಗೆ ಸಚಿವರು ಕರೆ ನೀಡಿದ್ದಾರೆ.

ಯಾವುದೇ ಪೋಷಕರು ಆತಂಕಕ್ಕೊಳಗಾಗದೇ, ತಮ್ಮ ಮಕ್ಕಳ ಹಿತದೃಷ್ಟಿಯಿಂದ ಸರಕಾರ ತೆಗೆದುಕೊಂಡಿರುವ ಈ ಕ್ರಮದ ಕುರಿತು ಭರವಸೆಯೊಂದಿಗೆ ತಮ್ಮ ಮಕ್ಕಳನ್ನು ಪರೀಕ್ಷೆ ಬರೆಯಲು ಅನುವು ಮಾಡಿಕೊಡಲು ಅವರು ಕೋರಿದ್ದಾರೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಸರಕಾರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಗಣಿತ ಭಾಷಾ ಪರೀಕ್ಷೆಗೆ ಹಾಜರಾದ ಕೊವಿಡ್ ಸೋಂಕಿತ ವಿದ್ಯಾರ್ಥಿಯೊಬ್ಬನ ಜೊತೆ ಪರೀಕ್ಷೆ ಬರೆದ 18 ವಿದ್ಯಾರ್ಥಿಗಳು ಹಾಗೂ ಒಬ್ಬ ಪರೀಕ್ಷಾ ಮೇಲ್ವಿಚಾರಕರಿಗೆ ಯಾವುದೇ ಕೋವಿಡ್ ಸೋಂಕು ತಗುಲಿಲ್ಲವೆಂದು ವೈದ್ಯಕೀಯ ತಪಾಸಣೆ ವರದಿಯಿಂದ ದೃಢಪಟ್ಟಿದೆ. ಯಾವುದೇ ಪೋಷಕರು, ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಕೋವಿಡ್ ಸೋಂಕಿತ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾದ ಕೊಠಡಿಯನ್ನು ಮುಚ್ಚಲಾಗಿದ್ದು, ಸೋಂಕು ನಿವಾರಕ ಕ್ರಮಗಳನ್ನು ಈಗಾಗಲೇ ಕಟ್ಟುನಿಟ್ಟಾಗಿ ತೆಗೆದುಕೊಳ್ಳಲಾಗಿದೆ, ಸೋಂಕಿತ ವಿದ್ಯಾರ್ಥಿಗೆ ಆಸ್ಪತ್ರೆಯಲ್ಲಿ ವೈದ್ಯಕೀಯ ಶುಶ್ರೂಶೆ ಮುಂದುವರಿದಿದ್ದು, ಆತನೂ ಸಹ ಸ್ವಲ್ಪ ಜ್ವರದ ಹೊರತುಪಡಿಸಿ ಬೇರೆ ಯಾವ ಗುಣಲಕ್ಷಣಗಳನ್ನೂ ತೋರದೆ ಸುರಕ್ಷಿತವಾಗಿದ್ದಾನೆ. ಹಾಗಾಗಿ, ಈ ಕೇಂದ್ರದಲ್ಲಿ ಕೋವಿಡ್ ಸೋಂಕಿತ ವಿದ್ಯಾರ್ಥಿಯನ್ನು ಹೊರತುಪಡಿಸಿ ಆ ಕೊಠಡಿಯಲ್ಲಿ ನಿನ್ನೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳೆಲ್ಲರೂ ನಾಳೆಯಿಂದ ಎಂದಿನಂತೆ ಪರೀಕ್ಷೆ ಬರೆಯಲಿದ್ದಾರೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News