ಎಲ್‍ಕೆಜಿಯಿಂದ 10ನೆ ತರಗತಿವರೆಗೆ ಆನ್‍ಲೈನ್ ಶಿಕ್ಷಣ ನೀಡಲು ಸರಕಾರ ಆದೇಶ
ಬೆಂಗಳೂರು, ಜೂ.28: ಹೈಕೋರ್ಟ್ ಆದೇಶ, ಪ್ರಗ್ಯತಾ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮಾರ್ಗದರ್ಶಿ ಪ್ರಕಾರ ರಾಜ್ಯದಲ್ಲಿನ ರಾಜ್ಯ ಪಠ್ಯಕ್ರಮ ಹಾಗೂ ಐಸಿಎಸ್‍ಇ, ಸಿಬಿಎಸ್‍ಇ ಪಠ್ಯಕ್ರಮ ಸೇರಿ ಎಲ್ಲ ಶಾಲೆಗಳಿಗೆ ಎಲ್‍ಕೆಜಿಯಿಂದ 10ನೆ ತರಗತಿವರೆಗೆ ಆನ್‍ಲೈನ್ ಶಿಕ್ಷಣ ನೀಡಲು ರಾಜ್ಯಪಾಲರ ಆದೇಶಾನುಸಾರ ಸರಕಾರದ ಅಧೀನ ಕಾರ್ಯದರ್ಶಿ(ಪ್ರ) ಅವರು ಆದೇಶ ಹೊರಡಿಸಿದ್ದಾರೆ.
ಪೂರ್ವ ಪ್ರಾಥಮಿಕ: 30 ನಿಮಿಷಗಳಿಗೆ ಮೀರದಂತೆ ಪಾಲಕರೊಂದಿಗೆ ಮಾತ್ರ ವಾರಕ್ಕೆ ಒಂದು ದಿನ ಆನ್‍ಲೈನ್ ಸಂವಹನ ಮತ್ತು ಮಾರ್ಗದರ್ಶನ ನೀಡಬಹುದು.
1 ರಿಂದ 5ನೆ ತರಗತಿ: 30-45 ನಿಮಿಷಗಳ 2 ಅವಧಿಗಳಿಗೆ ಮೀರದಂತೆ ದಿನ ಬಿಟ್ಟು ದಿನ(ವಾರದಲ್ಲಿ ಗರಿಷ್ಠ 3 ದಿನ) ಸಿಂಕ್ರೊನಸ್ ವಿಧಾನದಲ್ಲಿ ಆಲ್‍ಲೈನ್ ಶಿಕ್ಷಣ ನೀಡಬಹುದು.
6ರಿಂದ 8ನೆ ತರಗತಿ: 35-45 ನಿಮಿಷಗಳ 2 ಅವಧಿಗಳಿಗೆ ಮೀರದಂತೆ ವಾರದಲ್ಲಿ 5 ದಿನ ಸಿಂಕ್ರೊನಸ್ ವಿಧಾನದಲ್ಲಿ ಆನ್‍ಲೈನ್ ಶಿಕ್ಷಣ ನೀಡಬಹುದು.
9 ರಿಂದ 10ನೆ ತರಗತಿ: 30-45 ನಿಮಿಷಗಳ 4 ಅವಧಿಗಳಿಗೆ ಮೀರದಂತೆ ವಾರದಲ್ಲಿ 5 ದಿನ ಸಿಂಕ್ರೊನಸ್ ವಿಧಾನದಲ್ಲಿ ಆನ್‍ಲೈನ್ ಶಿಕ್ಷಣ ನೀಡಬಹುದು ಎಂದು ಆದೇಶ ಹೊರಡಿಸಲಾಗಿದೆ.
ಈ ವ್ಯವಸ್ಥೆಯು ಆನ್‍ಲೈನ್ ಶಿಕ್ಷಣದ ಮಾದರಿ ಸಿದ್ಧಪಡಿಸಲು ಸರಕಾರ ನೇಮಿಸಿರುವ ತಜ್ಞರ ಸಮಿತಿ ನೀಡುವ ವರದಿಯನ್ನು ಆಧರಿಸಿ ರಾಜ್ಯ ಸರಕಾರ ಹೊರತರಲಾಗುವ ಅಂತಿಮ ಮಾರ್ಗಸೂಚಿಗಳು ಬರುವವರೆಗೆ ಮಾತ್ರ ಜಾರಿಯಲ್ಲಿ ಇರುತ್ತದೆ. ಆನ್‍ಲೈನ್ ಶಿಕ್ಷಣಕ್ಕಾಗಿ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಬಾರದಾಗಿ ತಿಳಿಸಿದೆ. ಇದಕ್ಕಾಗಿ ತಗಲುವ ವೆಚ್ಚವನ್ನು ನಿಯಮಿತ ವಾರ್ಷಿಕ ಬೋಧನಾ ಶುಲ್ಕದಿಂದಲೇ ಭರಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.