ಉಡುಪಿ ಡಿಸಿ ಜಗದೀಶ್, ಕೋಲಾರದ 9 ಮಂದಿ ಪಿಡಿಒಗಳ ವಿರುದ್ಧ ಎಫ್‌ಐಆರ್

Update: 2020-06-28 17:07 GMT

ಕೋಲಾರ, ಜೂ.28: ಜಿಲ್ಲೆಯ ನಿರ್ಗಮಿತ ಜಿಪಂ ಸಿಇಒ, ಹಾಲಿ ಉಡುಪಿ ಜಿಲ್ಲಾಧಿಕಾರಿ ಜಗದೀಶ್‌ ಅವರಿಗೆ ಬೆಳ್ಳಿಗದೆ, ಕಿರೀಟ ಹಾಗೂ ಚಿನ್ನದ ಉಂಗುರ ನೀಡಿ ಬೀಳ್ಕೊಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಗದೀಶ್ ಸೇರಿದಂತೆ ತಾಪಂ ಇಒ ಮತ್ತು 9 ಮಂದಿ ಗ್ರಾಪಂ ಪಿಡಿಒಗಳ ಮೇಲೆ ಎಫ್‌ಐಆರ್ ದಾಖಲಾಗಿದೆ.

ಕೋಲಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 2019, ಆಗಸ್ಟ್ 23 ರಂದು ನಡೆದ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಕೋಲಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ 1988ರ ಅನ್ವಯ ತನಿಖೆ ನಡೆಸಿ ವರದಿ ನೀಡುವಂತೆ ಕೋಲಾರ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಆದೇಶ ನೀಡಿದೆ.

ಘಟನೆಗೆ ಸಂಬಂಧಪಟ್ಟಂತೆ ಕೋಲಾರದ ಎಸ್.ನಾರಾಯಣಸ್ವಾಮಿ ಎಂಬವರು ಭ್ರಷ್ಟಾಚಾರ ನಿಗ್ರಹ ದಳದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆ ದಾಖಲೆಗಳ ಸಮೇತ ದೂರು ಸಲ್ಲಿಸಿದ್ದರು. ಅಕ್ರಮ ಸಂಭಾವನೆ ಮೂಲಕ ನಿರ್ಗಮಿತ ಅಧಿಕಾರಿಗೆ ಬೀಳ್ಕೊಡುಗೆ ನಡೆಸಲಾಗಿದೆ ಎಂದು ಆರೋಪಿಸಿದ್ದರು. ಜೂನ್ 17, 2020 ರಂದು ಈ ಕುರಿತು ತನಿಖೆ ನಡೆಸುವಂತೆ ಜಿಲ್ಲಾ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಈ ಕುರಿತು ತನಿಖೆ ನಡೆಸಿ 25 ಆಗಸ್ಟ್ 2020 ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ನ್ಯಾಯಾಧೀಶರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಆದೇಶ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಜೂನ್ 25, 2020 ರಂದು ನಿರ್ಗಮಿತ ಜಿಪಂ ಸಿಇಒ ಜಗದೀಶ್, ಪಿಡಿಒಗಳಾದ ಕೆ.ಮಹೇಶ್‌ ಕುಮಾರ್, ಪಿ.ನಾರಾಯಣಪ್ಪ, ಎಂ.ರಾಮಕೃಷ್ಣ, ವಿ.ಶಂಕರ್, ಎನ್.ಸಂಪರಾಜ್, ಎಸ್.ಜಿ.ಹರೀಶ್ ಕುಮಾರ್, ಎಂ.ಸೋಮಶೇಖರ್, ಅಶ್ವತ್ಥ ನಾರಾಯಣ, ಎಂ.ಸುರೇಶ್‌ ಕುಮಾರ್ ಹಾಗೂ ಶ್ರೀನಿವಾಸಪುರ ತಾಪಂ ಇಒ ಎಸ್.ಆನಂದ್ ವಿರುದ್ಧ ಎಸಿಬಿಯು ಐಪಿಸಿ ಕಲಂ 465, 467, 468, 471ರ ಅನ್ವಯ ಎಫ್‌ಐಆರ್ ದಾಖಲಿಸಿಕೊಂಡು ಡಿವೈಎಸ್ಪಿ ಎಂ.ಎಲ್.ಪುರುಷೋತ್ತಮ್ ಮತ್ತು ಪೊಲೀಸ್ ನಿರೀಕ್ಷಕ ಜಿ.ಎನ್.ವೆಂಕಟಾಚಲಪತಿ ತನಿಖೆ ಕೈಗೊಂಡಿದ್ದಾರೆ.

ಈ ಪ್ರಕರಣದಲ್ಲಿ ಭಾಗವಹಿಸಿದ್ದ ನಿರ್ಗಮಿತ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೇರಿದಂತೆ ಒಟ್ಟು ಆರು ಮಂದಿ ಅಧಿಕಾರಿಗಳನ್ನು ಸಾಕ್ಷಿಗಳನ್ನಾಗಿ ಗುರುತಿಸಲಾಗಿದೆ.

ಈ ಹಿಂದೆಯೂ ಕೆಲವರು ಈ ಕುರಿತು ಆರೋಪ ಮಾಡಿದ್ದಾಗ ಪಿಡಿಒ ಸಂಘದ ವತಿಯಿಂದ ಸುದ್ದಿಗೋಷ್ಠಿ ನಡೆಸಿ ನಿರ್ಗಮಿತ ಸಿಇಒಗೆ ಬಾಡಿಗೆ ಬೆಳ್ಳಿ ಗದೆ, ಕಿರೀಟ ತಂದು ಸನ್ಮಾನ ಮಾಡಿದ್ದಾಗಿ ವಿವರಣೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News