ಸಾಮಾಜಿಕ ಬಹಿಷ್ಕಾರ: ದಯಾಮರಣ ಕೋರಿದ ಮೈಸೂರಿನ ಕುಟುಂಬ

Update: 2020-06-28 18:04 GMT

ಮೈಸೂರು,ಜೂ.28: ಗ್ರಾಮಸ್ಥರು ಮೆಕ್ಯಾನಿಕಲ್ ಇಂಜಿನಿಯರ್ ಇರುವ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎನ್ನಲಾಗಿದ್ದು, ಮನನೊಂದ ಕುಟುಂಬ ದಯಾಮರಣ ಕೋರಿರುವ ಘಟನೆ ನಂಜನಗೂಡು ತಾಲೂಕಿನ ಶಿರಮಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಶಿರಮಳ್ಳಿ ಗ್ರಾಮದ ಮಹದೇವಪ್ಪನವರ ಕುಟುಂಬದ ಮೇಲೆ ಸಾಮಾಜಿಕ ಬಹಿಷ್ಕಾರದ ಹಾಕಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಬಹಿಷ್ಕಾರ ಹೇರಲಾಗಿದ್ದು, ಕಿರುಕುಳ ನೀಡುತ್ತಿದ್ದಾರೆ ಎಂದು ಕುಟುಂಬ ಆರೋಪಿಸಿದೆ.

ಮಹದೇವಪ್ಪ ಅವರ ಪುತ್ರ ನವೀನ್ ಮೆಕ್ಯಾನಿಕಲ್ ಇಂಜಿನಿಯರ್. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ತೊರೆದು ಬಳಿಕ ಸ್ವಗ್ರಾಮಕ್ಕೆ ಆಗಮಿಸಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಮನೆಯ ಮುಂಭಾಗದಲ್ಲಿ ನಡೆದ ಚರಂಡಿ ಕಾಮಗಾರಿಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಶಿರಮಳ್ಳಿ ಗ್ರಾಮಸ್ಥರು ನವೀನ್ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಸ್ವಚ್ಛ ಭಾರತ ಅಭಿಯಾನದ ಯೋಜನೆ ಅಡಿಯಲ್ಲಿ ಮನೆ ಮುಂದೆ ನವೀನ್ ತಂದೆ ಮಹದೇವಪ್ಪ ಅವರು ಶೌಚಾಲಯ ನಿರ್ಮಿಸಿಕೊಳ್ಳುತ್ತಿದ್ದರು. ಈ ವೇಳೆ  ಶೌಚಾಲಯ ತೆರವುಗೊಳಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಶೌಚಾಲಯ ತೆರವುಗೊಳಿಸಲು ಒಪ್ಪದಿದ್ದಕ್ಕೆ ಮಹದೇವಪ್ಪ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರದ ಬರೆ ಹಾಕಲಾಗಿದೆ ಎನ್ನಲಾಗಿದೆ. ಇಂಜಿನಿಯರಿಂಗ್ ವೃತ್ತಿ ತೊರೆದು 4 ಎಕರೆ ಜಮೀನಿನಲ್ಲಿ ಚೆಂಡು ಹೂವು ರೇಷ್ಮೆ ಹಾಗೂ ಇನ್ನಿತರ ಬೆಳೆ  ಹಾಕಿರುವ ನವೀನ್ ಜಮೀನಿಗೆ, ಗ್ರಾಮದ ಯಾವೊಬ್ಬ ಕೂಲಿ ಕಾರ್ಮಿಕರು ಕೆಲಸಕ್ಕೆ ಬರುವಂತಿಲ್ಲ. ಯಾರಾದರೂ ಹೋದರೆ ದಂಡ ವಿಧಿಸುವ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಕೂಲಿ ಕಾರ್ಮಿಕರು ಜಮೀನಿನ ಕೆಲಸಕ್ಕೆ ಬಾರದ ಕಾರಣ ರೇಷ್ಮೆ ಬೆಳೆ ಮತ್ತು ಚೆಂಡು ಮಲ್ಲಿಗೆ ನೆಲೆ ಕಚ್ಚಿದೆ. ರೇಷ್ಮೆ ಗೂಡಿನ ಮನೆಯಲ್ಲಿ ಹುಳುಗಳು ಕೊಳೆತು ಹೋಗುತ್ತಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ಕುಟುಂಬ ಅಳಲು ತೋಡಿಕೊಂಡಿದೆ.

ಸಾಮಾಜಿಕ ಬಹಿಷ್ಕಾರ ಹೇರಿರುವುದರಿಂದ ಕುಟುಂಬವು ನ್ಯಾಯಕ್ಕಾಗಿ ನಂಜನಗೂಡಿನ ತಹಶೀಲ್ದಾರ್ ಕಚೇರಿಯ ಕದತಟ್ಟಿದೆ. ಸಾಮಾಜಿಕ ಬಹಿಷ್ಕಾರದಿಂದ ನೊಂದಿರುವ ಕುಟುಂಬ ತಹಶೀಲ್ದಾರ್ ಮೂಲಕ ರಾಜ್ಯಪಾಲರ ಬಳಿ ದಯಾಮರಣಕ್ಕೆ ಮನವಿ ಮಾಡಲು ನಿರ್ಧರಿಸಿದೆ ಎನ್ನಲಾಗಿದ್ದು, ನ್ಯಾಯ ಸಿಗದಿದ್ದಲ್ಲಿ ಸಾಮೂಹಿಕ ಆತ್ಮಹತ್ಯೆಗೆ ಕುಟುಂಬಸ್ಥರು ನಿರ್ಧಾರ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News