ಆಂಬ್ಯುಲೆನ್ಸ್ ಗಳ ನಿರ್ವಹಣೆಗೆ ಸರಳ ಪರಿಹಾರ ಕಂಡುಕೊಳ್ಳಿ: ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

Update: 2020-06-28 18:07 GMT

ಬೆಂಗಳೂರು, ಜೂ.28: ಉತ್ತಮ ರೀತಿಯ ತಂತ್ರಜ್ಞಾನ ಆಧಾರಿತ ಆಂಬ್ಯುಲೆನ್ಸ್ ಗಳ ಸೇವೆ ಜಾರಿಗೆ ಬರುವವರೆಗೆ ವಾಹನ ದಟ್ಟಣೆ ಸಮಸ್ಯೆ ಎದುರಿಸುತ್ತಿರುವ ಆಂಬ್ಯುಲೆನ್ಸ್ ಗಳ ನಿರ್ವಹಣೆಗೆ ಸರಳ ಪರಿಹಾರ ಕಂಡುಕೊಳ್ಳುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಸಂಚಾರ ದಟ್ಟಣೆಯಿಂದ ವಿಳಂಬವಾಗುತ್ತಿರುವ ಹಾಗೂ ಆಧುನಿಕ ಉಪಕರಣಗಳ ಕೊರತೆಯಿಂದ ಹಿಂದುಳಿದಿರುವ ಆಂಬ್ಯುಲೆನ್ಸ್ ಸೇವೆಯನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಉನ್ನತೀಕರಣಗೊಳಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯಿತು.

ಸರಕಾರದ ಪರ ವಕೀಲರು, ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಮತ್ತು ಸುಧಾರಿತ ಆಂಬ್ಯುಲೆನ್ಸ್ ನಿರ್ವಹಣಾ ವ್ಯವಸ್ಥೆಯನ್ನು ಜಾರಿ ಮಾಡಲು ಸರಕಾರ ಸಿದ್ಧತೆ ಮಾಡುತ್ತಿದೆ. ಈಗಾಗಲೇ ಆರೋಗ್ಯ ಇಲಾಖೆ ಸಿದ್ಧಪಡಿಸಿರುವ ಪ್ರಸ್ತಾಪವನ್ನು ಹಣಕಾಸು ಇಲಾಖೆಯ ಅನುಮೋದನೆ ಪಡೆದುಕೊಂಡು ಜಾರಿಗೆ ತರುತ್ತಿದೆ ಎಂದು ಪೀಠಕ್ಕೆ ವಿವರಣೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ಉದ್ದೇಶಿತ ಯೋಜನೆ ಜಾರಿ ಮಾಡಿ. ಆದರೆ, ಯೋಜನೆ ಇನ್ನೂ ಟೆಂಡರ್ ಹಂತವನ್ನೂ ತಲುಪಿಲ್ಲವಾಗಿದ್ದರಿಂದ ನಿರೀಕ್ಷಿತ ಸೇವೆ ಲಭ್ಯವಾಗಲು ಸಾಕಷ್ಟು ಸಮಯ ಹಿಡಿಯುತ್ತದೆ. ಅಲ್ಲಿಯವರೆಗೂ ಈಗಿರುವಂತೆಯೇ ಆ್ಯಂಬುಲೆನ್ಸ್ ಸೇವೆಯನ್ನು ನೀಡುವುದು ಸೂಕ್ತ ಎನಿಸುವುದಿಲ್ಲ. ಹೀಗಾಗಿ, ಆ್ಯಂಬುಲೆನ್ಸ್ ಸಂಚಾರಕ್ಕೆ ವಾಹನ ದಟ್ಟಣೆಯಾಗದಂತೆ ಹಾಗೂ ಸುಧಾರಿತ ಸೇವೆ ಲಭ್ಯವಾಗುವಂತೆ ಸರಳ ಉಪಾಯವನ್ನು ಸಾಧ್ಯವಾದಷ್ಟು ಬೇಗ ಕಂಡುಕೊಳ್ಳಲು ಸರಕಾರ ಮುಂದಾಗಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಮುಂದೂಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News