12 ಸಾವಿರ ರೂ. ಗೌರವಧನ ನೀಡದಿದ್ದರೆ ಜು.10ರಿಂದ ಆಶಾ ಕಾರ್ಯಕರ್ತೆಯರ ಸೇವೆ ಸ್ಥಗಿತ: ಡಾ.ನಾಗಲಕ್ಷ್ಮಿ ಎಚ್ಚರಿಕೆ

Update: 2020-06-28 18:12 GMT

ಬಳ್ಳಾರಿ, ಜೂ.28: ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ರೂ. ಗೌರವಧನ ಹಾಗೂ ಅಗತ್ಯ ಆರೋಗ್ಯ ಸಾಮಗ್ರಿಗಳನ್ನು ಒದಗಿಸದಿದ್ದರೆ ಜು.10ರಿಂದ ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರು ಸೇವೆಯನ್ನು ಸ್ಥಗಿತಗೊಳಿಸಲಿದ್ದಾರೆಂದು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಾ.ನಾಗಲಕ್ಷ್ಮಿ ಎಚ್ಚರಿಕೆ ನೀಡಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಜೂ.30ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಸೇರಿದಂತೆ ಸಚಿವ, ಶಾಸಕರಿಗೆ ಮನವಿ ಮಾಡಲಾಗುವುದು. ಸ್ಪಂದಿಸದಿದ್ದರೆ, ಜು.10ರಿಂದ ಸೇವೆಯನ್ನು ಸ್ಥಗಿತಗೊಳಿಸಲಾಗುವುದೆಂದು ತಿಳಿಸಿದ್ದಾರೆ.

ಆಶಾ ಕಾರ್ಯಕರ್ತೆಯರು ಕಳೆದು ಮೂರು ತಿಂಗಳಿನಿಂದ ವಿಶ್ರಾಂತಿಯಿಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್-19 ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು, ಮನೆ ಮನೆಗೆ ಹೋಗಿ ಸಮೀಕ್ಷೆ ಸೇರಿದಂತೆ ಸರಕಾರಕ್ಕೆ ಬೇಕಾದ ಅಗತ್ಯ ದಾಖಲೆಗಳನ್ನು ಒದಗಿಸುತ್ತಿದ್ದಾರೆ. ಆದರೂ ರಾಜ್ಯ ಸರಕಾರ ಆಶಾ ಕಾರ್ಯಕರ್ತೆಯರಿಗೆ ಅಗತ್ಯ ಸೌಲಭ್ಯ ಹಾಗೂ ಸುರಕ್ಷಿತ ಸಾಮಗ್ರಿಗಳನ್ನು ಒದಗಿಸಲು ಹಿಂದೇಟು ಹಾಕುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ತಮ್ಮ ಜೀವಗಳನ್ನು ಪಣಕಿಟ್ಟು ಕೋವಿಡ್-19 ವಿರುದ್ದ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ವಿಶೇಷ ಪ್ಯಾಕೇಜ್‍ನ್ನು ಘೋಷಿಸಬೇಕು. ಹಾಗೂ ತುರ್ತಾಗಿ ಕೊರೋನ ಸೋಂಕಿನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅಗತ್ಯ ಸುರಕ್ಷತಾ ಸಾಮಾಗ್ರಿಗಳನ್ನು ಒದಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಕೋವಿಡ್-19ಕ್ಕೂ ಮೊದಲಿನಿಂದಲೂ ನಮ್ಮ ಬೇಡಿಕೆಗಳಿಗಾಗಿ ಹೋರಾಟ ಹಮ್ಮಿಕೊಂಡಿದ್ದೆವು, ಆದರೆ, ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ನಮ್ಮ ಹೋರಾಟವನ್ನು ಬಿಟ್ಟು ಕೋವಿಡ್ ಸೇವೆಯಲ್ಲಿ ನಿರತರಾದೆವು. ನಮ್ಮ ಶ್ರಮಕ್ಕೆ ಸಹಕಾರಿ ಇಲಾಖೆ ನೀಡುತ್ತಿರುವ 3 ಸಾವಿರ ರೂ. ಪ್ರೋತ್ಸಾಹ ಧನ ಎಲ್ಲರಿಗೂ ಸಿಗುತ್ತಿಲ್ಲ. ಇದು ನಗರದಕ್ಕೆ ಮಾತ್ರ ಸೀಮಿತಗೊಂಡಿದೆ ಎಂದು ಅವರು ಅರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News