ಕೊರೋನ ಕಾಲದಲ್ಲಿ ರಾಮ್‌ದೇವ್ ಬೇಯಿಸಿದ ಮ್ಯಾಗಿ ‘ಕೊರೋನಿಲ್’!

Update: 2020-06-29 04:35 GMT

ಆಗಿನ್ನೂ ಭಾರತಕ್ಕೆ ಕೊರೋನ ಕಾಲಿಟ್ಟಿರಲಿಲ್ಲ. ಆದರೆ ಭಾರತದ ಬೀದಿ ಬದಿಯ ‘ವೇದ ವಿಜ್ಞಾನಿ’ಗಳು ಕೊರೋನಕ್ಕೆ ಔಷಧಿಯನ್ನು ಸಂಶೋಧಿಸಿ ಬಿಟ್ಟಿದ್ದರು. ‘ಗೋ ಮೂತ್ರ ಸೇವನೆ’ಯಿಂದ ಕೊರೋನ ವೈರಸ್‌ನಿಂದ ಪಾರಾಗಬಹುದು ಎಂದು ರಾಜಕಾರಣಿಗಳೂ ಸೇರಿದಂತೆ, ಸಂಘಪರಿವಾರದ ಮೇಧಾವಿಗಳು ಸಾರ್ವಜನಿಕವಾಗಿ ಹೇಳಿಕೆ ನೀಡತೊಡಗಿದ್ದರು. ‘ಗೋಮೂತ್ರ, ಸೆಗಣಿ’ ಇತ್ಯಾದಿಗಳಿಂದಾಗಿ ಭಾರತಕ್ಕೆ ಕೊರೋನ ಆಗಮಿಸುವುದು ಸಾಧ್ಯವೇ ಇಲ್ಲ ಎಂದು ಪರವಾನಿಗೆ ಹೊರಡಿಸುತ್ತಿದ್ದಾಗ ಇತ್ತ ಭಾರತದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚ ತೊಡಗಿತು. ಆಗಲೂ, ಪತಂಜಲಿಯಂತಹ ಸಂಸ್ಥೆಗಳು ‘ಗೋಮೂತ್ರವೇ ಔಷಧಿ’ ಎನ್ನುವ ವದಂತಿಗಳನ್ನು ಹರಡಿ, ಗೋದಾಮಿನಲ್ಲಿ ದುರ್ವಾಸನೆ ಬೀರುತ್ತಿದ್ದ ಗೋಮೂತ್ರದ ಬಾಟಲಿಗಳನ್ನೆಲ್ಲ ಮಾರುಕಟ್ಟೆಗೆ ಬಿಟ್ಟವು. ದೇಶದ ಒಂದು ಸಣ್ಣ ಗುಂಪು ವದಂತಿಗಳನ್ನು ನಂಬಿ, ಗೋಮೂತ್ರ ಸೇವನೆಗೆ ಶುರುಹಚ್ಚಿಯೇ ಬಿಟ್ಟಿತು. ಹಲವು ನಕಲಿ ವೈದ್ಯರು ಜನರ ಮೌಢ್ಯ, ಆತಂಕಗಳನ್ನು ಬಳಸಿ ದುಡ್ಡು ಮಾಡಿಕೊಂಡರು. ಸರಕಾರದೊಳಗಿರುವ ರಾಜಕಾರಣಿಗಳು, ಸಂಘಪರಿವಾರದ ಮುಖಂಡರೂ ಕೊರೋನಗಳಿಗೆ ಬೆಳ್ಳುಳ್ಳಿ, ನೀರುಳ್ಳಿ ಔಷಧಿಗಳನ್ನು ಘೋಷಿಸತೊಡಗಿದರು. ಇದೇ ಸಂದರ್ಭದಲ್ಲಿ ಸ್ವಯಂ ಘೋಷಿತ ಬಾಬಾ, ರಾಮ್‌ದೇವ್ ಅವರು ‘‘ಸಾಸಿವೆ ಎಣ್ಣೆಯನ್ನು ಮೂಗಿನೊಳಗೆ ಹಾಕಿದರೆ ಕೊರೋನ ವಾಸಿಯಾಗುತ್ತದೆ’’ ಎನ್ನುವ ತಮ್ಮ ಸಂಶೋಧನೆಯನ್ನು ಪುಕ್ಕಟೆಯಾಗಿ ಬಹಿರಂಗಗೊಳಿಸಿದರು. ಜೊತೆಗೆ ಯೋಗಗಳಿಂದ ಕೊರೋನವನ್ನು ತಡೆಯುವ ಶಕ್ತಿ ತನ್ನದಾಗಿಸಿಕೊಳ್ಳಬಹುದು ಎಂದು ಉಪದೇಶಗಳನ್ನು ನೀಡತೊಡಗಿದರು. ದೇಶದ ಮೂಲೆ ಮೂಲೆಗಳಿಂದ ಆಯುರ್ವೇದ ವೈದ್ಯರೆಂದು ಕರೆಸಿಕೊಂಡವರು ‘‘ನಮ್ಮಲ್ಲಿ ಕೊರೋನಕ್ಕೆ ಔಷಧಿಯಿದೆ’’ ಎಂದು ಹೇಳತೊಡಗಿದರು. ಆದರೆ, ಕೊರೋನ ಇವರ ಕುರಿತು ಎಳ್ಳಷ್ಟು ತಲೆಕೆಡಿಸಿಕೊಳ್ಳದೆ ದೇಶಾದ್ಯಂತ ವ್ಯಾಪಿಸುತ್ತಾ ಹೋಯಿತು. ಇಂದು ಕೊರೋನ ಕಾರಣಕ್ಕಾಗಿ ಭಾರತ ‘ವಿಶ್ವ ಗುರು’ ಎಂದು ಗುರುತಿಸಿಕೊಳ್ಳುವ ಹಂತದಲ್ಲಿದೆ. ಭಾರತದ ಈ ಸಾಧನೆಯ ಹಿಂದಿರುವ ದೀಪ, ತಟ್ಟೆಗಳು ಮತ್ತು ನಕಲಿ ವೇದ ವಿಜ್ಞಾನಿಗಳ ಕೊಡುಗೆಗಳನ್ನು ನಾವು ಸ್ಮರಿಸಲೇಬೇಕಾಗಿದೆ.

 ಭಾರತದ ಮಟ್ಟಿಗೆ ಕೊರೋನಕ್ಕಿಂತ ಭೀಕರವಾಗಿದೆ, ಕೊರೋನ ಔಷಧಿಯ ಹೆಸರಿನಲ್ಲಿ ಜನರನ್ನು ಸುಲಿಯುವುದಕ್ಕೆ ಹೊಂಚು ಕೂತಿರುವ ನಕಲಿ ವೈರಸ್‌ಗಳ ಸಂಖ್ಯೆ. ಅವರೆಲ್ಲರಿಗೂ ಗುರುವಿನ ಸ್ಥಾನದಲ್ಲಿರುವ ಬಾಬಾ ರಾಮ್ ದೇವ್ ಅದಾಗಲೇ ಕೊರೋನಕ್ಕೆ ಅಧಿಕೃತ ಔಷಧಿ ಕಂಡು ಹಿಡಿದು, ಅದರ ಕುರಿತಂತೆ ಪತ್ರಿಕಾಗೋಷ್ಠಿಯನ್ನೂ ನಡೆಸಿ ಬಿಟ್ಟಿದ್ದಾರೆ. ಔಷಧಿ ತಯಾರಿಸುವುದಕ್ಕೆ ಸರಕಾರದಿಂದ ಅನುಮತಿ ಪಡೆದ ಒಂದೇ ತಿಂಗಳಲ್ಲಿ , ಔಷಧಿಯನ್ನು ಕಂಡು ಹಿಡಿದು ಅದನ್ನು ಮಾರುಕಟ್ಟೆಗೆ ಬಿಡಲು ಮುಂದಾಗಿದ್ದಾರೆ. ಆದರೆ ಸರಿಯಾದ ಹೊತ್ತಿಗೆ ಸರಕಾರ ಮಧ್ಯ ಪ್ರವೇಶಿಸಿ ಜನರಿಗಾಗುವ ಅಪಾಯವನ್ನು ಮತ್ತು ಭಾರತಕ್ಕೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಾಗುವ ಅವಮಾನವನ್ನು ತಡೆದಿದೆ. ಈಗಾಗಲೇ ಪತಂಜಲಿ ಕಂಪೆನಿಯ ಮುಖ್ಯಸ್ಥರ ವಿರುದ್ಧ ದೂರೂ ದಾಖಲಾಗಿದೆ. ನೆಗಡಿ, ಜ್ವರ ಸಂದರ್ಭದಲ್ಲಿ ದೇಹದ ಪ್ರತಿರೋಧ ಶಕ್ತಿ ಹೆಚ್ಚಿಸುವ ಔಷಧಿ ಕಂಡು ಹಿಡಿಯಲು ಸರಕಾರದ ಅನುಮತಿ ಕೇಳಿ, ಇದೀಗ ಏಕಾಏಕಿ ಪತ್ರಿಕಾಗೋಷ್ಠಿಯಲ್ಲಿ ಕೊರೋನಾಕ್ಕೆ ಔಷಧಿ ಘೋಷಿಸಿದ್ದಾರೆ. ಈ ಔಷಧಿಯನ್ನು ಏಳು ದಿನಗಳ ಕಾಲ ಸೇವಿಸಿದರೆ ಕೊರೋನ ಇಲ್ಲವಾಗುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ. ಕೊರೋನದ ಕುರಿತಂತೆ ಇರುವ ಗೊಂದಲ, ಅಸ್ಪಷ್ಟತೆ, ಜನರೊಳಗಿನ ಆತಂಕಗಳನ್ನೇ ಬಂಡವಾಳ ಮಾಡಿಕೊಂಡು ಅವರು ಹೊಸತೊಂದು ಮಾರುಕಟ್ಟೆಯನ್ನು ಪತಂಜಲಿಗಾಗಿ ಸೃಷ್ಟಿಸಲು ಹೊರಟಿದ್ದಾರೆ. ಈವರೆಗೆ ಮಾರುಕಟ್ಟೆಗೆ ಬಿಟ್ಟ ಪತಂಜಲಿಯ ‘ಸ್ವದೇಶಿ’ ಉತ್ಪನ್ನಗಳ ಬಂಡವಾಳ ಬಯಲಾಗಿ ಅವೆಲ್ಲವೂ ಗೋದಾಮಿನಲ್ಲಿ ಕೊಳೆಯುತ್ತಿರುವ ಹೊತ್ತಿನಲ್ಲಿ ಅವರು ಪತಂಜಲಿಯನ್ನು ತಾತ್ಕಾಲಿಕವಾಗಿ ಮೇಲೆತ್ತುವುದಕ್ಕೆ ಕೊರೋನ ವೈರಸ್ ಜೊತೆಗೆ ನಂಟು ಕುದುರಿಸಿದ್ದಾರೆ. ‘ಐದೇ ನಿಮಿಷದಲ್ಲಿ ಮ್ಯಾಗಿ ಬೇಯಿಸಿದಂತೆ’ ಕೊರೋನ ಔಷಧಿಯನ್ನು ಸೃಷ್ಟಿಸಿ, ಅದನ್ನು ದೇಶದ ಪ್ರಜೆಗಳ ಮೇಲೆ ಬಳಸಲು ಮುಂದಾಗಿದ್ದಾರೆ. ಯಾವುದೇ ಬಂಡವಾಳವಿಲ್ಲದೆ ಕೇವಲ ಜನರ ಆತಂಕವನ್ನೇ ಕೋಟ್ಯಂತರ ರೂಪಾಯಿಯಾಗಿ ನಗದೀಕರಿಸಲು ಹೊರಟಿದ್ದಾರೆ.

ರಾಮ್‌ದೇವ್ ಅವರ ಔಷಧಿಯನ್ನು ಅನುಮಾನಿಸುವುದಕ್ಕೆ ಈಗಾಗಲೇ ಸರಕಾರ ಅಥವಾ ಆಯುಷ್ ಹೇಳಿದ ಕಾರಣಗಳನ್ನು ಹೊರತು ಪಡಿಸಿಯೂ ನೂರು ಕಾರಣಗಳಿವೆ. ಪತಂಜಲಿ ಈಗಾಗಲೇ ತನ್ನ ವಿಶ್ವಾಸಾರ್ಹತೆಯನ್ನು ಮಾರುಕಟ್ಟೆಯಲ್ಲಿ ಕಳೆದುಕೊಂಡಿದೆ. ವಿದೇಶಿ ಮ್ಯಾಗಿ ಬದಲಿಗೆ ಸ್ವದೇಶಿ ಮ್ಯಾಗಿಯನ್ನು ಮಾರುಕಟ್ಟೆಗೆ ಬಿಟ್ಟ ಪತಂಜಲಿ, ಈ ಮೂಲಕ ತನ್ನದು ಅಪ್ಪಟ ಸೀಸ ರಹಿತ ಮ್ಯಾಗಿ ಎಂದು ಘೋಷಿಸಿಕೊಂಡಿತು. ಜನರು ಅದನ್ನು ನಂಬಿ ಮುಗಿ ಬಿದ್ದು ಬಳಸಿ ‘ದೇಶ ಪ್ರೇಮಿ’ಯೆನಿಸಿಕೊಂಡರು. ಆದರೆ 2016ರಲ್ಲಿ ಪತಂಜಲಿ ಮ್ಯಾಗಿಯಲ್ಲಿ ಅತ್ಯಧಿಕ ಸೀಸವಿರುವುದು ಬಯಲಾಯಿತು. ಅಷ್ಟೇ ಅಲ್ಲ, ಮ್ಯಾಗಿಯ ಗುಣಮಟ್ಟದ ಕುರಿತಂತೆಯೂ ಆಕ್ಷೇಪ ಕೇಳಿ ಬಂದು, ಅವರ ಉತ್ಪನ್ನ ಮೂಲೆಗುಂಪಾಯಿತು. ಅವರು ಮಾರುಕಟ್ಟೆಗೆ ಬಿಟ್ಟ ‘ಸ್ವದೇಶಿ ತುಪ್ಪ’ದ ಬಂಡವಾಳವೂ ಬಳಿಕ ಬೆಳಕಿಗೆ ಬಂತು. ಅಷ್ಟೇ ಯಾಕೆ, ಸರಕಾರದ ಜೊತೆಗಿರುವ ಸಂಬಂಧವನ್ನು ಬಳಸಿಕೊಂಡು, ರಕ್ಷಣಾ ಇಲಾಖೆಗೊ ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಪೂರೈಕೆ ಮಾಡಿ ಗುಣಮಟ್ಟ ಇಲಾಖೆಗಳಿಂದ ಛೀಮಾರಿ ಹಾಕಿಸಿಕೊಂಡರು. ಇವರ ಸೋಪು, ಪೇಸ್ಟ್ ಬಳಸಿ ಕಂಗಾಲಾದ ಜನರ ಸಂಖ್ಯೆ ಬಹುದೊಡ್ಡದಿದೆ. ತಪ್ಪು ಮಾಹಿತಿ, ಕಳಪೆ ಉತ್ಪನ್ನಗಳಿಗಾಗಿ ಪದೇ ಪದೇ ಪತಂಜಲಿಗೆ ಸರಕಾರ ದಂಡ ವಿಧಿಸಿದೆ. ಒಂದು ಕಾಲದಲ್ಲಿ ಸ್ವದೇಶಿ ಉತ್ಪನ್ನಗಳ ಬಳಕೆಯ ಕುರಿತಂತೆ ದೊಡ್ಡ ಮಟ್ಟದ ಚಳವಳಿಯನ್ನು ಹುಟ್ಟಿಸಿ ಹಾಕಿದವರು ರಾಜೀವ್ ದೀಕ್ಷಿತ್. ‘ಆಝಾದಿ ಬಚಾವೋ ಆಂದೋಲನ’, ‘ಭಾರತ್ ಸ್ವಾಭಿಮಾನ್ ಆಂದೋಲನ’ ಮೊದಲಾವ ಚಳವಳಿಯ ಮೂಲಕ ಕಾಂಗ್ರೆಸ್ ಸರಕಾರದ ವಿರುದ್ಧ ದೇಶಾದ್ಯಂತ ಆಂದೋಲನ ಮಾಡಿದ ಹೆಗ್ಗಳಿಕೆ ಇವರದು. ರಾಮ್‌ದೇವ್ ಅವರ ಸಂಘಟನೆಯ ಭಾಗವಾಗಿದ್ದರು. ಆದರೆ ರಾಮ್‌ದೇವ್‌ಗಿಂತಲೂ ಹೆಚ್ಚು ಜನರ ಒಲವನ್ನು ತನ್ನದಾಗಿಸಿಕೊಂಡಿದ್ದರು. ಆದರೆ ಇವರು ತನ್ನ 43ನೇ ವಯಸ್ಸಿನಲ್ಲಿ ನಿಗೂಢವಾಗಿ ಮೃತಪಟ್ಟರು. ಪತಂಜಲಿಯ ತಪ್ಪು ಔಷಧಿಗಳೇ ಅವರನ್ನು ಬಲಿ ಪಡೆಯಿತು ಎನ್ನುವ ಆರೋಪ ರಾಮ್‌ದೇವ್ ಅವರ ಮೇಲೆ ಬಿತ್ತು. ಈ ಬಗ್ಗೆ ದೇಶಾದ್ಯಂತ ಭಾರೀ ಚರ್ಚೆಗಳು ನಡೆದವು. ಒಂದೆಡೆ, ದೀಕ್ಷಿತ್ ಅವರನ್ನು ವ್ಯವಸ್ಥಿತವಾಗಿ ಕೊಲೆಮಾಡಲಾಗಿದೆ ಎಂಬ ಆರೋಪ ಕೇಳಿ ಬಂದರೆ, ಮಗದೊಂದೆಡೆ ರಾಮ್‌ದೇವ್ ಅವರ ಸ್ವದೇಶಿ ಔಷಧಿಗಳಿಂದಲೇ ಅವರ ಸಾವು ಸಂಭವಿಸಿತು ಎಂದು ಇನ್ನು ಕೆಲವರು ವಾದಿಸತೊಡಗಿದರು. ದೀಕ್ಷಿತ್ ಸಾವಿನಲ್ಲಿ ಪತಂಜಲಿ ಕೈವಾಡವಿಲ್ಲ ಎಂಬ ಬಗ್ಗೆ ರಾಮ್‌ದೇವ್ ಸುದೀರ್ಘ ಪತ್ರಿಕಾಗೋಷ್ಠಿಯನ್ನೂ ನಡೆಸಿದ್ದರು. ಆದರೆ ದೀಕ್ಷಿತ್ ಸಾವು ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಈ ಪ್ರಕರಣದಲ್ಲಿ, ಪತಂಜಲಿಯ ಔಷಧಿಗಳು ಮೊದಲ ಬಾರಿ ದೇಶಾದ್ಯಂತ ಪ್ರಶ್ನೆಗೊಳಗಾಯಿತು. ಹಾಗೆಯೇ ಆಯುರ್ವೇದ ಔಷಧಿಯಲ್ಲಿ ಮನುಷ್ಯನ ಎಲುಬುಗನ್ನ್ನು ಬಳಸುತ್ತಿರುವುದು, ಗುಟ್ಟಾಗಿ ಅಲೋಪತಿ ಔಷಧಿಗಳನ್ನು ಕಳಬೆರಕೆ ಮಾಡುವ ಆರೋಪವೂ ರಾಮ್‌ದೇವ್ ಅವರ ಮೇಲಿದೆ. ಇದೇ ಸಂದರ್ಭದಲ್ಲಿ ತನ್ನ ಗುರು ಸ್ವಾಮಿ ಶಂಕರ ದೇವ್ ಅವರ ನಾಪತ್ತೆ, ಕೊಲೆಯ ಆರೋಪಗಳನ್ನೂ ಹೆಗಲಲ್ಲಿ ಹೊತ್ತು ತಿರುಗಾಡುತ್ತಿದ್ದಾರೆ. ಇವರ ಇನ್ನೋವ ಆಪ್ತಮಿತ್ರ ಬಾಲಕೃಷ್ಣರ ಮೇಲೆ ನಕಲಿ ಪಾಸ್‌ಪೋರ್ಟ್ ಹೊಂದಿದ ಆರೋಪವಿದೆ. ಇಂತಹ ಹಿನ್ನೆಲೆ ಹೊಂದಿರುವ ಮನುಷ್ಯನೊಬ್ಬ, ಸರಕಾರದ ಅನುಮತಿ ಇಲ್ಲದೆ, ಬರೇ ಒಂದು ತಿಂಗಳಲ್ಲಿ ಕೊರೋನಗೆ ಔಷಧಿ ಕಂಡು ಹಿಡಿದಿದ್ದೇನೆ ಎಂದು ಘೋಷಿಸಿದರೆ, ತಕ್ಷಣ ಅವರನ್ನು ಬಂಧಿಸಿ, ವಿಚಾರಣೆಗೊಳಪಡಿಸಬೇಕು. ಆದರೆ ಸರಕಾರ ರಾಮ್‌ದೇವ್ ಅವರ ಔಷಧಿಯನ್ನು ತಡೆಹಿಡಿದಿದೆಯೇ ಹೊರತು, ವೈದ್ಯಕೀಯ ರಂಗದಲ್ಲಿ ಭಾರತದ ಹಿರಿಮೆ, ವರ್ಚಸ್ಸಿಗೆ ಕಳಂಕ ಹಚ್ಚಲು ಹೊರಟ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಯಾವ ಸೂಚನೆಯನ್ನೂ ನೀಡಿಲ್ಲ. ಭಾರತ ಸ್ವದೇಶಿ ಚಿಂತನೆಗಳ ಮೂಲಕ ರೂಪುಗೊಳ್ಳಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ವಿಜ್ಞಾನ, ವೈದ್ಯಕೀಯ, ತಂತ್ರಜ್ಞಾನಕ್ಕೆ ಸಂಬಂಧಿಸಿ ಈ ದೇಶ ತನ್ನದೇ ಆದ ಸ್ವದೇಶಿ ಕೊಡುಗೆಗಳನ್ನು ಕೊಟ್ಟಿದೆ. ಅವೆಲ್ಲದರ ಹಿಂದೆ ಅಪಾರ ಶ್ರಮ, ಸಾಧನೆಗಳಿವೆ. ಆದರೆ ಕೇಸರಿ ಬಟ್ಟೆ ಧರಿಸಿ, ಜನರ ವೌಢ್ಯಗಳನ್ನೇ ಬಂಡವಾಳವಾಗಿಸಿಕೊಂಡ ರಾಮ್‌ದೇವ್‌ರಂತಹ ಸ್ವಯಂಘೋಷಿತ ಬಾಬಾಗಳ ಸಂಶೋಧನೆ, ‘ಸ್ವದೇಶಿ ಹಿರಿಮೆ’ಗಳಿಗೆ ಕಳಂಕ ಹಚ್ಚಬಹುದೇ ಹೊರತು, ಅದರಿಂದ ಜನರಿಗಾಗಲಿ, ದೇಶಕ್ಕಾಗಲಿ ಯಾವುದೇ ಪ್ರಯೋಜನವಾಗದು. ಈ ನಿಟ್ಟಿನಲ್ಲಿ, ಜನರ ಭಾವನೆಗಳನ್ನು, ವೌಢ್ಯಗಳನ್ನು ಬಂಡವಾಳವಾಗಿಸಿಕೊಂಡು ದಂಧೆ ನಡೆಸುವ ನಕಲಿ ಸ್ವದೇಶಿವಾದಿಗಳನ್ನು ಗುರುತಿಸಿ ಅವರನ್ನು ಜೈಲಿಗೆ ತಳ್ಳುವ ಕೆಲಸ ಸರಕಾರದಿಂದ ಆರಂಭವಾಗಬೇಕು. ಅದುವೇ ಸ್ವದೇಶಿ ಚಳವಳಿಗೆ ಸರಕಾರ ನೀಡುವ ಬಹುದೊಡ್ಡ ಕೊಡುಗೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News