ನಾವು ಕೊರೋನ ಸೋಂಕು ನಿಯಂತ್ರಣದಲ್ಲಿ ಮುಂದಿದ್ದೇವೆ: ಸಿಎಂ ಯಡಿಯೂರಪ್ಪ

Update: 2020-06-29 14:01 GMT

ಬೆಂಗಳೂರು, ಜೂ. 29: ಕೊರೋನ ಸೋಂಕಿನ ಗಂಭೀರ ಪರಿಸ್ಥಿತಿ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದು, ನಾಳೆ(ಜೂ.30) ಒಳಗಾಗಿ ಕನಿಷ್ಠ 2,500 ಹಾಸಿಗೆಗಳನ್ನು ಒದಗಿಸಿ, ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನೀಡಲು ಮುಂದಾಗಬೇಕು ಎಂದು ಖಾಸಗಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಖಾಸಗಿ ಆಸ್ಪತ್ರೆಗಳ ವ್ಯವಸ್ಥಾಪಕರು ಮತ್ತು ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳು ಸರಕಾರದ ಕೋರಿಕೆಯಂತೆ ಹಾಸಿಗೆಗಳನ್ನು ಒದಗಿಸಿ, ಸೋಂಕಿತರಿಗೆ ಚಿಕಿತ್ಸೆ ನೀಡಲಿದೆ. ಈ ಬಗ್ಗೆ ಯಾವುದೇ ಸಂಶಯ ಬೇಡ ಎಂದು ಹೇಳಿದರು.

ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳಿಗೆ ಸರಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ದರವನ್ನು ಪಡೆಯದಂತೆ ಸೂಚನೆ ನೀಡಲಾಗಿದೆ. ಈ ಸಂಬಂಧ ಖಾಸಗಿ ಆಸ್ಪತ್ರೆಗಳ ವ್ಯವಸ್ಥಾಪಕರು ಚರ್ಚಿಸಿ ರಾಜ್ಯ ಸರಕಾರಕ್ಕೆ ಈ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದ ಅವರು, ಸೋಂಕಿತರು ಮತ್ತು ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದರು.

ಆತಂಕ ಬೇಡ: ಮುಂಬೈ, ಹೊಸದಿಲ್ಲಿ, ಚೆನ್ನೈ ಹಾಗೂ ಕೊಲ್ಕತ್ತಾ ಮಹಾನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ ಅತ್ಯಂತ ಕಡಿಮೆ ಇದೆ. ಹೀಗಾಗಿ ಬೆಂಗಳೂರಿನಲ್ಲಿ ಸೋಂಕು ಮಿತಿ ಮೀರುತ್ತಿದೆ ಎಂಬ ಆತಂಕಕ್ಕೆ ಸಾರ್ವಜನಿಕರು ಒಳಗಾಗುವ ಅಗತ್ಯವಿಲ್ಲ ಎಂದು ಯಡಿಯೂರಪ್ಪ ಇದೇ ವೇಳೆ ಅಭಯ ನೀಡಿದರು.

ಮುಂಬೈನಲ್ಲಿ 74,252 ಸೋಂಕಿತರ ಪೈಕಿ 42,329 ಮಂದಿ ಗುಣಮುಖರಾಗಿದ್ದು, 4,284 ಮಂದಿ ಅಸುನೀಗಿದ್ದಾರೆ. ಹೊಸದಿಲ್ಲಿಯಲ್ಲಿ 80,188 ಮಂದಿ ಪೈಕಿ 49,301 ಮಂದಿ ಗುಣಮುಖರಾಗಿದ್ದು, 2,558 ಮಂದಿ ಸಾವನ್ನಪ್ಪಿದ್ದಾರೆ. ಚೆನ್ನೈಯಲ್ಲಿ 51,699 ಮಂದಿ ಸೋಂಕಿತರ ಪೈಕಿ 31,045 ಮಂದಿ ಗುಣಮುಖರಾಗಿದ್ದು, 733 ಮಂದಿ ಮೃತಪಟ್ಟಿದ್ದಾರೆ.

ಬೆಂಗಳೂರು ಮಹಾನಗರದಲ್ಲಿ ಕೇವಲ 3,321 ಮಂದಿಗೆ ಸೋಂಕು ದೃಢಪಟ್ಟಿದ್ದು, ಆ ಪೈಕಿ 433 ಮಂದಿ ಗುಣಮುಖರಾಗಿದ್ದು, 81 ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ ಬಹಳ ಕಡಿಮೆ ಇದ್ದು, ಎಲ್ಲರ ಸಹಕಾರದಿಂದ ಕೊರೋನ ಸೋಂಕು ತಡೆಗಟ್ಟಲು ಸರಕಾರ ಶಕ್ತಿಮೀರಿ ಪ್ರಯತ್ನ ನಡೆಸಿದೆ ಎಂದರು.

ಬೆಂಗಳೂರು ನಗರದಲ್ಲಿ ಮನೆ-ಮನೆ ಸಮೀಕ್ಷೆಗೆ ಮುಂದಾಗಿದ್ದು, ಸೋಂಕಿನ ಲಕ್ಷಣ ಇರುವವರಿಗೆ ಸೂಕ್ತ ಚಿಕಿತ್ಸೆ ಕಲ್ಪಿಸಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಕೊರೋನ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಸೂಕ್ತ ವ್ಯವಸ್ಥೆ ಒದಗಿಸಲಾಗುತ್ತಿದ್ದು, ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ-ಊಟದ ವ್ಯವಸ್ಥೆ ನೀಡಲಾಗುತ್ತಿದೆ ಎಂದರು.

ಬೆಂಗಳೂರು ನಗರದಲ್ಲಿ ಸೋಂಕು ಮಿತಿ ಮೀರುತ್ತಿದೆ ಎಂಬ ಆತಂಕಕ್ಕೆ ಜನರು ಒಳಗಾಗಿ, ಗಾಬರಿ ಪಡುವ ಅಗತ್ಯವಿಲ್ಲ. ಬೇರೆ ಮಹಾ ನಗರಗಳ ಅಂಕಿ-ಅಂಶಗಳನ್ನು ಅವಲೋಕಿಸಿದರೆ ನಾವು ಸೋಂಕು ನಿಯಂತ್ರಣದಲ್ಲಿ ಮುಂದಿದ್ದೇವೆ ಎಂದ ಯಡಿಯೂರಪ್ಪ, ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು. ಮಾರ್ಗಸೂಚಿ ಪಾಲಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಸರಕಾರದೊಂದಿಗೆ ಕೈಜೋಡಿಸಬೇಕು ಎಂದು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News