ಜೂ.30ರಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಸಂಜೆ 6 ರಿಂದ ಬೆಳಗ್ಗೆ 6ರವರೆಗೆ ಕಫ್ರ್ಯೂ: ಡಿಸಿಎಂ ಕಾರಜೋಳ

Update: 2020-06-29 15:19 GMT

ಬಾಗಲಕೋಟೆ, ಜೂ.29: ಜಿಲ್ಲೆಯಾದ್ಯಂತ ಜೂ.30 ರಿಂದ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಕರ್ಫ್ಯೂ ಜಾರಿ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

ಸೋಮವಾರ ನಗರದ ನೂತನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಬಜ್ಜಿ, ಚೋಡ, ತಂಪು ಪಾನಿಯ ಹಾಗೂ ಹಣ್ಣಿನ ರಸ ಅಂಗಡಿಗಳಿಂದ ಅಪಾಯವಿದ್ದು, ಈ ಹಿನ್ನೆಲೆಯಲ್ಲಿ ಸಂಜೆ 6 ರಿಂದ ಬೆಳಗ್ಗೆ 6 ವರೆಗೆ ಕರ್ಫ್ಯೂ ಜಾರಿ ಮಾಡಲಾಗುವುದು ಎಂದರು.

ಅಲ್ಲದೇ ಜಿಲ್ಲೆಯಲ್ಲಿರುವ 9 ತಾಲೂಕು ಕೇಂದ್ರಗಳಿಗೆ ಪ್ಲೈಯಿಂಗ್ ಸ್ಕ್ವಾಡ್‍ಗಳನ್ನು ನೇಮಕ ಮಾಡಲಾಗಿದ್ದು, ಅವರು ದಿನನಿತ್ಯ ಮಾರ್ಕೆಟ್, ಹೊಟೇಲ್, ಖರೀದಿ ಸ್ಥಳಗಳಲ್ಲಿ ನಿಗಾವಹಿಸಲಿದ್ದಾರೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಈ ವರೆಗೆ 12,587 ವ್ಯಕ್ತಿಗಳ ಸ್ಯಾಂಪಲ್ ಪರೀಕ್ಷಿಸಲಾಗಿದ್ದು, ಈ ಪೈಕಿ 11,089 ನೆಗಟಿವ್, 184 ಪಾಸಿಟಿವ್ ಪ್ರಕರಣ ವರದಿಯಾಗಿವೆ. ಜಿಲ್ಲೆಯಿಂದ ಕಳುಹಿಸಲಾದ 1245 ಸ್ಯಾಂಪಲ್‍ಗಳ ವರದಿ ಬರಬೇಕಾಗಿದೆ. 117 ಜನ ಕೋವಿಡ್‍ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 62 ಮಾತ್ರ ಸಕ್ರಿಯ ಪ್ರಕರಣಗಳು ಇವೆ. 14 ಫೀವರ್ ಕ್ಲಿನಿಕ್ ಗಳ ಮೂಲಕ 16,825 ಜನರನ್ನು ಸ್ಕ್ರೀನಿಂಗ್ ಮಾಡಲಾಗಿದೆ. 52 ಸಾಂಸ್ಥಿಕ ಕ್ವಾರಂಟೈನ್‍ಗಳಲ್ಲಿ 540 ಜನರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಸೋಂಕಿತ ವ್ಯಕ್ತಿಗಳು ವಾಸಿಸುವ 18 ಕಂಟೈನ್‍ಮೆಂಟ್ ಝೋನ್‍ಗಳಿವೆ. ನಿಷೇಧಿತ ಪ್ರದೇಶದಲ್ಲಿರುವ ಜನರಿಗೆ ಆಹಾರಧಾನ್ಯ, ತರಕಾರಿ, ಹಣ್ಣು ಹಂಪಲು, ಔಷಧ ಹಾಗೂ ಇನ್ನಿತರ ಮೂಲಭೂತ ಸಾಮಗ್ರಿಗಳನ್ನು ಮನೆ ಬಾಗಿಲಿಗೆ ಪೂರೈಸಲಾಗುತ್ತಿದೆ. ಬೇರೆ ರಾಜ್ಯದಿಂದ ಬಸ್‍ಗಳ ಮೂಲಕ 2833, ರೈಲಿನ ಮೂಲಕ 446 ಜನ ಬಂದಿದ್ದು, ಅವರನ್ನು ಸಾಂಸ್ಥಿಕ ಮತ್ತು ಹೋಮ್ ಕ್ವಾರಂಟೈನ್ ಮಾಡಲಾಗಿದೆ ಎಂದು ಕಾರಜೋಳ ಹೇಳಿದರು.

ಕ್ವಾರಂಟೈನ್ ವಾಚ್ ಆಪ್, ಕಾಂಟ್ಯಾಕ್ಟ್ ಟ್ರೇಸಿಂಗ್ ಆಪ್, ಹೆಲ್ತ ವಾಚ್ ಮತ್ತು ಕಂಟೈನ್‍ಮೆಂಟ್ ವಾಚ್ ಆಪ್‍ಗಳ ನಿರ್ವಹಣೆಗಾಗಿ ಅಧಿಕಾರಿ, ಸಿಬ್ಬಂದಿಗಳನ್ನು ನೇಮಿಸಿ ಮಾಹಿತಿಯನ್ನು ಇಂಡೀಕರಿಸಲು ಸೂಕ್ತ ಕ್ರಮವಹಿಸಲಾಗಿದೆ. ಕೋವಿಡ್ ನಿಯಂತ್ರಣಕ್ಕಾಗಿ ಗ್ರಾಮ ಮಟ್ಟದಲ್ಲಿ ಗಸ್ತು ಜಾಗೃತಿ ತಂಡವನ್ನು ರಚಿಸಿ ಗ್ರಾಮಗಳಲ್ಲಿ ಕೋವಿಡ್ ಕುರಿತು ಜಾಗೃತಿ ಮೂಡಿಲಾಗಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News