ಎಸೆಸೆಲ್ಸಿ: ವಿಜ್ಞಾನ ಸೇರಿ ಇತರೆ ಪರೀಕ್ಷೆಗೆ 16,373 ವಿದ್ಯಾರ್ಥಿಗಳು ಗೈರು

Update: 2020-06-29 17:16 GMT

ಬೆಂಗಳೂರು, ಜೂ.29: ಎಸೆಸೆಲ್ಸಿ ವಿಜ್ಞಾನ, ರಾಜ್ಯಶಾಸ್ತ್ರ ಹಾಗೂ ಸಂಗೀತ ಪರೀಕ್ಷೆಗಳಿಗೆ ಒಟ್ಟಾರೆ ಶೇ.97.93 ವಿದ್ಯಾರ್ಥಿಗಳು ಹಾಜರಾಗಿದ್ದು, 16,373 ಮಂದಿ ಗೈರಾಗಿದ್ದಾರೆಂದು ಶಿಕ್ಷಣ ಸಚಿವ ಸುರೇಶ್‍ಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಒಟ್ಟು 7,91,102 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 7,74,729 ವಿದ್ಯಾರ್ಥಿಗಳು ಹಾಜರಾಗುವ ಮೂಲಕ ಎಸೆಸೆಲ್ಸಿ ನಾಲ್ಕನೇ ದಿನದ ವಿಜ್ಞಾನ, ರಾಜ್ಯಶಾಸ್ತ್ರ, ಸಂಗೀತ ಪರೀಕ್ಷೆಯನ್ನು ಸುರಕ್ಷಿತ ವಾತಾವರಣದಲ್ಲಿ ಬರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಂಟೈನ್ಮೆಟ್ ಪ್ರದೇಶಗಳ 2,942 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೋವಿಡೇತರ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 491 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ವೇಳೆ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ ಧಾರವಾಡ-2, ರಾಯಚೂರಿನ ಒಬ್ಬ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸರಕಾರಿ, ಖಾಸಗಿ ವಸತಿ ನಿಲಯಗಳಲ್ಲಿ ಇದ್ದು, 1442 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ನೆರೆ ರಾಜ್ಯಗಳಿಂದ 645 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾಗಿತ್ತು. ಅದರಲ್ಲಿ 53 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಹಾಗೂ 12644 ವಲಸೆ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದರು. ಅದರಲ್ಲಿ 12,539 ವಿದ್ಯಾರ್ಥಿಗಳು ಹಾಜರಾಗಿದ್ದರು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಶಿಕ್ಷಣ ಇಲಾಖಾ ಆಯುಕ್ತ ಜಗದೀಶ್, ಸಮಗ್ರ ಶಿಕ್ಷಣ ಕರ್ನಾಟಕ ಯೋಜನಾ ನಿರ್ದೇಶಕ ಡಾ.ರೇಜು, ರಾಜ್ಯ ಕೋವಿಡ್ ಸಮಿತಿ ಅಧ್ಯಕ್ಷ ಡಾ.ಸುದರ್ಶನ್ ಉಪಸ್ಥಿತರಿದ್ದರು.

ಹೋಮ್ ಕ್ವಾರಂಟೈನ್‍ನಲ್ಲಿ ಹಾಗೂ ಕೋವಿಡ್ ದೃಢಪಟ್ಟ ವಿದ್ಯಾರ್ಥಿಗಳಿಗೆ ಈಗ ನಡೆಯುತ್ತಿರುವ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ. ಇವರೆಲ್ಲರಿಗೂ ಸಕಾರಣದ ಆಧಾರದ ಮೇಲೆ ಮುಂದಿನ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡುವ ವ್ಯವಸ್ಥೆ ಮಾಡಲಾಗುವುದು.

-ಸುರೇಶ್‍ ಕುಮಾರ್, ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News