ಮೈಸೂರು: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತರಿಂದ ಬಾರ್ ಕೋಲು ಚಳುವಳಿ

Update: 2020-06-29 18:11 GMT

ಮೈಸೂರು,ಜೂ.29: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಬಾರ್ ಕೋಲು ಚಳುವಳಿಯನ್ನು ಕರ್ನಾಟಕ ರಾಜ್ಯ ರೈತ ವಿರೋಧಿ ಕಾಯ್ದೆ ಹೋರಾಟ ಸಮಿತಿ ವತಿಯಿಂದ ಬೈಕ್ ರ‍್ಯಾಲಿಯ ಮೂಲಕ ಹಮ್ಮಿ ಕೊಳ್ಳಲಾಯಿತು. 

ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳ ರೈತರು ಸೋಮವಾರ ಬಾರ್ ಕೋಲ್ ಚಳವಳಿ ನಡೆಸಿ ಒತ್ತಾಯ ಪತ್ರ ಸಲ್ಲಿಸಿದರು. ಗನ್ ಹೌಸ್ ನಿಂದ ಬಾರ್ ಕೋಲ್ ಹಿಡಿದು ಬೈಕ್ ಮೂಲಕ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಕರ್ನಾಟಕ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಹೊರಟಿರುವ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ತಾವು ಸಹಿ ಹಾಕಬಾರದೆಂದು ರಾಜ್ಯಪಾಲರನ್ನು ಒತ್ತಾಯಿಸಿದರು.

ರಾಜ್ಯದಲ್ಲಿ ಸಣ್ಣ ಸಣ್ಣ ಹಿಡುವಳಿದಾರರು ಶೇ.80ರಷ್ಟು ವ್ಯವಸಾಯ ಚಟುವಟಿಕೆ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಕೊರೋನ ಲಾಕ್ ಡೌನ್ ಸಮಸ್ಯೆಯಿಂದ ರೈತರು ಬೆಳೆದ ಉತ್ಪನ್ನಗಳಿಗೆ ಸಮರ್ಪಕ ಮಾರುಕಟ್ಟೆ ಸಿಗದೇ ಬೆಲೆ ಕುಸಿತದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ಅವಕಾಶವನ್ನು ಉಪಯೋಗಿಸಿಕೊಂಡು ಬಂಡವಾಳಶಾಹಿಗಳು, ಭೂ ಮಾಫಿಯಾದವರು, ಕೈಗಾರಿಕೋದ್ಯಮಿಗಳು ಕೃಷಿ ಭೂಮಿಯನ್ನು ಖರೀದಿಸಿ ಪಾಳು ಬಿಡುತ್ತಾರೆ. ಇದರಿಂದ ಕೃಷಿ ಉತ್ಪಾದನೆಯು ಕುಂಠಿತವಾಗುತ್ತದೆ. ಈಗಾಗಲೇ ರಾಜ್ಯದಲ್ಲಿ 22 ಲಕ್ಷ ಹೆಕ್ಟೇರ್ ಉದ್ದಿಮೆಯ ನೆಪದಲ್ಲಿ ಕೃಷಿ ಭೂಮಿ ದೊಡ್ಡ ದೊಡ್ಡ ನಗರಗಳ ಸುತ್ತಮುತ್ತ ಭೂ ಮಾಫಿಯಾದವರ ಕೈಗೆ ಸಿಲುಕಿ ಪಾಳು ಬಿದ್ದಿದೆ. ಈ ಜಮೀನುಗಳನ್ನು ಮಾರಿದ ರೈತರು ಹಣ ಮತ್ತು ಭೂಮಿ ಎರಡನ್ನು ಕಳೆದುಕೊಂಡು ನಗರಗಳಲ್ಲಿ ಕೂಲಿಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಈ ಕಾಯ್ದೆ ಜಾರಿಯಾದರೆ ಕಾರ್ಪೋರೇಟ್ ಕಂಪನಿ ಕೃಷಿ ನಡೆಸಲು ಮುಂದಾಗುತ್ತದೆ. ಕಾರ್ಪೋರೇಟ್ ಕೃಷಿಯಲ್ಲಿ ಹೆಚ್ಚು ರಸಗೊಬ್ಬರ, ಕೀಟನಾಶಕ ಬಳಸುವುದರಿಂದ ಭೂಮಿಯ ಫಲವತ್ತತೆ ಕಡಿಮೆಯಾಗಿ ಪರಿಸರದ ವಾತಾವರಣ ಹದಗೆಡುತ್ತದೆ. ಕೃಷಿ ಭೂಮಿ ಬರಡು ಭೂಮಿಯಾಗಿ ಉಳಿಯುತ್ತದೆ ಎಂದು ಆರೋಪಿಸಿದರು.

ಈಗಾಗಲೇ ರೈತ ಸಂಘದ ವತಿಯಿಂದ ವಿವಿಧ ರೀತಿಯಲ್ಲಿ ಹೋರಾಟ, ಪ್ರತಿಭಟನೆ ನಡೆದಿದ್ದು, ಈಗ ವಿಭಿನ್ನ ರೀತಿಯಲ್ಲಿ ಬಾರುಕೋಲು ಚಳವಳಿ ನಡೆಸಿ ಒತ್ತಾಯ ಪತ್ರ ಸಲ್ಲಿಸಲಿದ್ದೇವೆ. ತಾವು ಸೂಕ್ತ ಕ್ರಮ ಕೈಗೊಂಡು ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಜಾರಿಗೆ ತರದಂತೆ ತಡೆ ಹಿಡಿಯಬೇಕೆಂದು ಒತ್ತಾಯಿಸಿದರು.

ಪ್ರತಿಭಟನಾ ರ‍್ಯಾಲಿಯಲ್ಲಿ ಕುರುಬೂರು ಶಾಂತಕುಮಾರ್, ಹೊಸೂರು ಕುಮಾರ್, ವಿದ್ಯಾಸಾಗರ್, ಸುಧೀರ್ ಕುಮಾರ್, ಅತ್ತಹಳ್ಳಿ ದೇವರಾಜ್, ಗುರುಪ್ರಸಾದ್, ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಸೇರಿದಂತೆ ಹಲವಾರು ರೈತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News