ಜೆಎಸ್‍ಎಸ್‍ನ ಕೋವಿಡ್ ಪರೀಕ್ಷಾ ಕೇಂದ್ರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ

Update: 2020-06-29 18:35 GMT

ಬೆಂಗಳೂರು, ಜೂ. 29: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಹೆಚ್ಚಿನ ಕೋವಿಡ್ ಪರೀಕ್ಷೆಯ ಅಗತ್ಯವಿದೆ. ಜೆಎಸ್‍ಎಸ್ ಸಂಸ್ಥೆಯ ವತಿಯಿಂದ ಕೋವಿಡ್ ಪರೀಕ್ಷಾ ಕೇಂದ್ರ ಸ್ಥಾಪಿಸಿರುವುದು ಈ ನಿಟ್ಟಿನಲ್ಲಿ ಬಹಳ ಉಪಯುಕ್ತವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗಾಗಿ ಸ್ಥಾಪಿಸಿರುವ ಪ್ರಯೋಗಾಲಯವನ್ನು ಆನ್‍ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಜೆ.ಎಸ್.ಎಸ್. ಸಂಸ್ಥೆಯು ಈ ಕಾರ್ಯ ಶ್ಲಾಘನೀಯ ಮತ್ತು ಅನುಕರಣೀಯ. ಜೆ.ಎಸ್.ಎಸ್. ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ರಾಜ್ಯದಲ್ಲಿ ವೈದ್ಯಕೀಯ ಸೇವೆ ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ ಎಂದರು.

ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಅನ್ನ, ಅರಿವು, ಆರೋಗ್ಯ ಎಂಬ ತ್ರಿತತ್ವಗಳನ್ನು ಪಾಲಿಸಿಕೊಂಡು ಬಂದಿದ್ದಾರೆ. ಇವರ ನೇತೃತ್ವದಲ್ಲಿ ಅನೇಕ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಗಳು ನಡೆಯುತ್ತಾ ಬಂದಿವೆ ಎಂದರು. ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗಾಗಿ ಸ್ಥಾಪಿತಲಾಗಿರುವ ಪ್ರಯೋಗಾಲಯವು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ ಅನುಮೋದನೆಯನ್ನು ಪಡೆದಿದೆ.

ಮೈಸೂರಿನಲ್ಲಿ ಸ್ಥಾಪಿಸಿರುವ ಏಕೈಕ ಸರಕಾರೇತರ ಕೋವಿಡ್-19 ಪರೀಕ್ಷಾ ಪ್ರಯೋಗಾಲಯ ಇದಾಗಿದೆ. ಕೋವಿಡ್ ನಿಯಂತ್ರಣಕ್ಕೆ ಸರಕಾರ ಅಗತ್ಯವಿರುವ ಎಲ್ಲ ಕ್ರಮಗಳನ್ನ ಕೈಗೊಳ್ಳುತ್ತಿದ್ದು, ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಖಾಸಗಿ ಸಂಸ್ಥೆಗಳು ಕೋವಿಡ್ ನಿಯಂತ್ರಣದಲ್ಲಿ ಸರಕಾರದೊಂದಿಗೆ ಕೈಜೋಡಿಸಿರುವುದು ಸ್ವಾಗತಾರ್ಹ. ಜೆ.ಎಸ್.ಎಸ್. ಸಂಸ್ಥೆಯ ಈ ಉಪಕ್ರಮ ಉಳಿದ ಖಾಸಗಿ ಸಂಸ್ಥೆಗಳಿಗೆ ಮಾದರಿಯಾಗಲಿ ಎಂದು ಆಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News