ಕೋವಿಡ್ ಚಿಕಿತ್ಸಾ ವಿಧಾನದಲ್ಲಿ ಬದಲಾವಣೆ: ಸಚಿವ ಡಾ. ಸುಧಾಕರ್

Update: 2020-06-30 11:57 GMT

ಬೆಂಗಳೂರು, ಜೂ. 30: ಕೊರೋನ ಸೋಂಕಿತರಿಗೆ ಇನ್ನು ಮುಂದೆ ಚಿಕಿತ್ಸೆ ವಿಧಿ-ವಿಧಾನಗಳಲ್ಲೂ ಕೆಲ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಗಂಭೀರವಲ್ಲದ ರೋಗ ಲಕ್ಷಣ ಇಲ್ಲದ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಇಟ್ಟು ನಿಗಾವಹಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಮಂಗಳವಾರ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಕೊರೋನ ಸೋಂಕು ತಗುಲಿದವರ ಪೈಕಿ ರೋಗ ಲಕ್ಷಣಗಳು ಇದ್ದವರು, 60ಕ್ಕೂ ಹೆಚ್ಚು ವಯಸ್ಸಿನ ಮತ್ತು ಡಯಾಬಿಟಿಸ್, ರಕ್ತದೊತ್ತಡ ಸೇರಿದಂತೆ ಗಂಭೀರ ಕಾಯಿಲೆ ಇದ್ದವರನ್ನು ಮಾತ್ರ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ಈ ಎಲ್ಲ ಮಾಹಿತಿ ಇರುವ ಚಿಕಿತ್ಸಾ ವಿಧಾನದ ವಿಧಿ-ವಿಧಾನಗಳ ಮಾರ್ಗಸೂಚಿಯನ್ನು ನಾಳೆ ಬಿಡುಗಡೆ ಮಾಡಲಾಗುವುದು ಎಂದರು.

ಕೊರೋನ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರಕ್ಕೆ ಎಲ್ಲ ರೀತಿಯ ನೆರವು ನೀಡಲು ಬೆಂಗಳೂರು ನಗರದಲ್ಲಿರುವ ಖಾಸಗಿ ವೈದ್ಯಕೀಯ ಕಾಲೇಜುಗಳು ಸಮ್ಮತಿಸಿವೆ. ತಕ್ಷಣವೇ 2 ಸಾವಿರದಷ್ಟು ಹಾಸಿಗೆಗಳನ್ನು ನೀಡಲಿದ್ದು, ಒಂದು ವಾರದಲ್ಲಿ ಇದನ್ನು ನಾಲ್ಕೂವರೆ ಸಾವಿರಕ್ಕೆ ಹೆಚ್ಚಿಸುವುದಾಗಿ ಆಡಳಿತ ಮಂಡಳಿ ಪ್ರತಿನಿಧಿಗಳು ಭರವಸೆ ನೀಡಿದ್ದಾರೆಂದು ಸುಧಾಕರ್ ತಿಳಿಸಿದರು.

ನಗರದಲ್ಲಿ ಒಟ್ಟು 11 ಖಾಸಗಿ ಮತ್ತು 3 ಸರಕಾರಿ ವೈದ್ಯಕೀಯ ಕಾಲೇಜ್‍ಗಳಿವೆ. ಇವುಗಳಿಂದ ಕೋವಿಡ್ ಚಿಕಿತ್ಸೆಗಾಗಿ ಆರು ಸಾವಿರ ಹಾಸಿಗೆಗಳು ಲಭ್ಯವಾಗಲಿವೆ. ಒಂದು ವಾರದಲ್ಲಿ ಈಗ ತಿಳಿಸಿರುವ ಹಾಸಿಗೆ, ವೈದ್ಯರು ಮತ್ತು ಸಿಬ್ಬಂದಿ ಸೌಲಭ್ಯಗಳನ್ನು ಖಾಸಗಿ ಕಾಲೇಜುಗಳು ಸರಕಾರಕ್ಕೆ ನೀಡಲಿವೆ. ಅದನ್ನು ಬಿಬಿಎಂಪಿಯ ಕೇಂದ್ರೀಕೃತ ವ್ಯವಸ್ಥೆ ಮೂಲಕ ಕೋವಿಡ್ ರೋಗಿಗಳ ಚಿಕಿತ್ಸೆಗೆ ಹಂಚಿಕೆ ಮಾಡಲಾಗುವುದು ಎಂದರು.

ಇಲ್ಲಿ ಕರ್ತವ್ಯಕ್ಕೆ ಹಾಜರಾಗುವ ವೈದ್ಯರು ಮತ್ತು ಇತರೆ ಸಿಬ್ಬಂದಿಗೆ ಸರಕಾರಿ ಸೇವೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ನೀಡುವ ವಿಮೆ ಸೌಲಭ್ಯಗಳನ್ನು ವಿಸ್ತರಿಸಲಾಗುವುದು. ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಕರ್ತವ್ಯ ನಿರ್ವಹಿಸಲು ಖಾಸಗಿ ಕಾಲೇಜು ಪಿಜಿ ವಿದ್ಯಾರ್ಥಿಗಳು ಮತ್ತು ಇತರೆ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವುದು.

'ಪತ್ನಿ, ಪುತ್ರಿ ಹಾಗೂ ತಂದೆಗೆ ಕೊರೋನ ಸೋಂಕು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಕ್ವಾರಂಟೈನ್ ಮುಗಿಸಿ ಕರ್ತವ್ಯಕ್ಕೆ ಮರಳಿದ್ದೇನೆ. ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳ ದರವೇ ಖಾಸಗಿ ವೈದ್ಯಕೀಯ ಕಾಲೇಜುಗಳಿಗೂ ಅನ್ವಯವಾಗಲಿದೆ'
-ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News