ಸರ್ವಪಕ್ಷಗಳ ಪರಿಶೀಲನಾ ಸಮಿತಿ ರಚನೆಗೆ ಸಿದ್ದರಾಮಯ್ಯ ಆಗ್ರಹ

Update: 2020-06-30 12:44 GMT

ಬೆಂಗಳೂರು, ಜೂ.30: ಕೊರೋನ ಚಿಕಿತ್ಸೆ ಬಗ್ಗೆ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಇದರ ಮೇಲೆ ನಿಗಾ ಇಡಲು ಮುಖ್ಯಮಂತ್ರಿ ತಕ್ಷಣ ಸರ್ವಪಕ್ಷಗಳ ಪರಿಶೀಲನಾ ಸಮಿತಿ ರಚಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‍ಗಳನ್ನು ಮಾಡಿರುವ ಅವರು, ಪಕ್ಷಗಳಲ್ಲಿರುವ ವೃತ್ತಿನಿರತ ಮತ್ತು ವೈದ್ಯಕೀಯ ಶಿಕ್ಷಣ ಹೊಂದಿರುವ ನಾಯಕರನ್ನು ಇದರಲ್ಲಿ ಸೇರಿಸಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.

ಕೊರೋನ ಚಿಕಿತ್ಸೆಗೆ ಮೀಸಲಿಟ್ಟಿರುವ ಸರಕಾರಿ ಆಸ್ಪತ್ರೆಗಳ ಬಗ್ಗೆ ನಿರ್ಲಕ್ಷ್ಯ, ತಾರತಮ್ಯ ನೀತಿ ಮತ್ತು ಭ್ರಷ್ಟಾಚಾರದ ಆರೋಪಗಳಿವೆ. ರಾಜಕೀಯ ಪ್ರಭಾವ ಬಳಸಿ ಬಲವಿದ್ದವರು ಬದುಕಿಕೊಳ್ಳುತ್ತಾರೆ. ಬಡವರಿಗೆ ದಿಕ್ಕಿಲ್ಲದಂತಹ ಸ್ಥಿತಿ. ಮುಖ್ಯಮಂತ್ರಿ ಯಡಿಯೂರಪ್ಪ ಈ ಕಡೆ ಗಮನ ಹರಿಸಿ ಎಂದು ಅವರು ಒತ್ತಾಯಿಸಿದ್ದಾರೆ.

ರೋಗಿಗಳಿಗೆ ತಾನು ಪಡೆಯುತ್ತಿರುವ ಚಿಕಿತ್ಸೆಯ ಸಂಪೂರ್ಣ ವಿವರ ಪಡೆಯುವ ಕಾನೂನುಬದ್ಧ ಹಕ್ಕಿದೆ. ಸೋಂಕಿತರಿಗೆ ನೀಡುತ್ತಿರುವ ಔಷಧಿ, ಅನುಸರಿಸುತ್ತಿರುವ ಚಿಕಿತ್ಸಾ ವಿಧಾನ ಏನು ಎಂಬುದನ್ನು ತಿಳಿಸದೆ ರೋಗಿಗಳನ್ನು ಕತ್ತಲಲ್ಲಿಡಲಾಗುತ್ತಿದೆ. ಯಡಿಯೂರಪ್ಪ ಅವರೇ ಇದು ಅನ್ಯಾಯ ಅಲ್ಲವೇ ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನ ಚಿಕಿತ್ಸೆಗೆ ಅವಕಾಶ ಸ್ವಾಗತಾರ್ಹ ಕ್ರಮ. ಚಿಕಿತ್ಸಾ ಶುಲ್ಕ ಕಡಿಮೆ ಮಾಡಲು ಒಪ್ಪಿರುವ ಖಾಸಗಿಯವರು ಚಿಕಿತ್ಸೆಯ ಗುಣಮಟ್ಟದಲ್ಲಿ ರಾಜಿಯಾಗದಂತೆ ನಿಗಾ ಇಡಬೇಕು. ಸೋಂಕಿತರಿಗೆ ನೀಡುತ್ತಿರುವ ಔಷಧಿ ಮತ್ತು ಅನುಸರಿಸಲಾಗುತ್ತಿರುವ ಚಿಕಿತ್ಸಾ ವಿಧಾನದ ಸಂಪೂರ್ಣ ಮಾಹಿತಿಯನ್ನು ಮೊದಲೇ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News