ಸಹಕಾರ ಬ್ಯಾಂಕನ್ನು ಆರ್ ಬಿಐ ವ್ಯಾಪ್ತಿಗೆ ತಂದಿರುವುದು ಉತ್ತಮ ಕ್ರಮ: ಎಸ್.ಟಿ.ಸೋಮಶೇಖರ

Update: 2020-06-30 12:56 GMT

ಬೆಂಗಳೂರು, ಜೂ.30: ರಾಜ್ಯದ ಸಹಕಾರ ವಲಯದಲ್ಲಿರುವ ಎಲ್ಲ ಬ್ಯಾಂಕ್‍ಗಳನ್ನು ಆರ್‍ಬಿಐ ವ್ಯಾಪ್ತಿಗೆ ತಂದಿರುವ ಕೇಂದ್ರ ಸರಕಾರದ ಕ್ರಮ ಉತ್ತಮವಾಗಿದ್ದು, ಇದರಿಂದ ಅಕ್ರಮಗಳಿಗೆ ಅಡಿವಾಣ ಬೀಳಲಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ ತಿಳಿಸಿದ್ದಾರೆ. 

ಮಂಗಳವಾರ ನಗರದ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗ ಸಹಕಾರಿ ಬ್ಯಾಂಕ್‍ನ ಆಡಿಟ್ ಸೇರಿದಂತೆ ಎಲ್ಲವೂ ಆರ್‍ಬಿಐ ಅಡಿಯಲ್ಲೇ ನಡೆಯುವುದರಿಂದ ಪಾರದರ್ಶಕತೆಯನ್ನು ಕಾಯ್ದುಕೊಂಡು ಹೋಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

55 ಕೋಟಿ ರೂ. ದೇಣಿಗೆ: ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ಸಹಕಾರ ಇಲಾಖೆಯಿಂದ ಮೊದಲ ಭಾಗವಾಗಿ 23 ಕೋಟಿ ರೂ. ನೀಡಿದ್ದೇವೆ. ಬಳಿಕ 30 ಕೋಟಿ ರೂ. ಸೇರಿ ಇಲ್ಲಿಯವರೆಗೂ 53 ಕೋಟಿ ರೂ. ಸಂಗ್ರಹಿಸಿ ಕೊಡಲಾಗಿದೆ. ಇದೇ ರೀತಿ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ.ನಂತೆ ತಗುಲುವ ಒಟ್ಟು 12.75 ಕೋಟಿ ರೂ.ವನ್ನು ಸಹಕಾರ ಇಲಾಖೆಯಿಂದಲೇ ಭರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳದ ಅಧ್ಯಕ್ಷ ಜಿ.ಪಿ.ಪಾಟೀಲ ಮಾತನಾಡಿ, ನಗರದ ಕೆ.ಜಿ.ರಸ್ತೆಯ ಜನತಾ ಬಝಾರ್ ನಲ್ಲಿ ಸಹಕಾರ ಮಹಾಮಂಡಳಕ್ಕೆ ಸಂಬಂಧಿಸಿದಂತೆ ಕಾಂಪ್ಲೆಕ್ಸ್ ಮಾಡುವ ವಿಷಯದ ವಿವಾದವು ಕೋರ್ಟ್‍ನಲ್ಲಿದ್ದು, ಇದನ್ನು ಸಚಿವ ಎಸ್.ಟಿ.ಸೋಮಶೇಖರ ಮಾತುಕತೆಯ ಮೂಲಕ ಬಗೆಹರಿಸಿ ಕೊಡಬೇಕೆಂದು ಮನವಿ ಮಾಡಿದರು. ಈ ವೇಳೆ ಸಹಕಾರ ಗ್ರಾಹಕರ ಮಹಾಮಂಡಳದ ನಿರ್ದೇಶಕ ಪರಮೇಶ್ವರ್ ಸೇರಿ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News