ಕೋವಿಡ್ ವೈರಾಣು ನಿಯಂತ್ರಣಕ್ಕೆ ಒಟ್ಟಾಗಿ ಹೋರಾಡೋಣ: ಸಿಎಂ ಯಡಿಯೂರಪ್ಪ

Update: 2020-06-30 15:25 GMT

ಬೆಂಗಳೂರು, ಜೂ.30: ಪ್ರಧಾನಿ ನರೇಂದ್ರ ಮೋದಿ ಕರೆಯಂತೆ ಎಲ್ಲರೂ ಲಾಕ್‍ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಅಂತರವನ್ನು ಕಾಯ್ದುಕೊಂಡು, ಮಾಸ್ಕ್ ಅನ್ನು ಬಳಸಿ, ಆರೋಗ್ಯವನ್ನು ಕಾಪಾಡಿಕೊಂಡು ಕೋವಿಡ್ ವೈರಾಣುವನ್ನು ನಿಯಂತ್ರಣಕ್ಕೆ ತರಲು ಒಟ್ಟಾಗಿ ಹೋರಾಡೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ.

ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣದ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ, ಕೋವಿಡ್ ನಿಯಂತ್ರಣದಲ್ಲಿ ಇತರೆ ದೇಶಗಳಿಗೆ ಹೋಲಿಸಿದಲ್ಲಿ ನಮ್ಮ ದೇಶದಲ್ಲಿ ಉತ್ತಮ ಸ್ಥಿತಿಯಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಇದಕ್ಕೆ ದೇಶದ ಜನತೆ ಲಾಕ್‍ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರುವುದು ಪ್ರಮುಖ ಕಾರಣವೆಂದು ತಿಳಿಸಿದ್ದಾರೆ ಎಂದರು.

ಅನ್‍ಲಾಕ್-1ರ ಅವಧಿಯಲ್ಲಿ ನಿಯಮಗಳ ಬಗ್ಗೆ ಹೆಚ್ಚಿನ ಗಮನ ನೀಡದಿರುವುದು ಆತಂಕದ ಸಂಗತಿಯಾಗಿದೆ. ಈ ಬಗ್ಗೆ ಜನರು ಎಚ್ಚೆತ್ತುಕೊಂಡು ನಿಯಮಗಳನ್ನು ಪಾಲಿಸಿ, ಸಂವೇದನಾಶೀಲತೆಯಿಂದ ತೀರ್ಮಾನ ತೆಗೆದುಕೊಳ್ಳುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ ಎಂಬ ಆಶಾಭಾವನೆಯನ್ನು ಪ್ರಧಾನಿ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಲಾಕ್‍ಡೌನ್ ಅವಧಿಯಲ್ಲಿ ಜಾರಿಗೆ ತಂದ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ವಯ ದೇಶದ 80 ಕೋಟಿ ಜನಸಂಖ್ಯೆಗೆ ಎಪ್ರಿಲ್‍ನಿಂದ ಜೂನ್ ತಿಂಗಳವರೆಗೆ ಪ್ರತಿ ತಿಂಗಳು ಪ್ರತಿ ವ್ಯಕ್ತಿಗೆ 5 ಕೆಜಿಯಂತೆ ಅಕ್ಕಿ ಅಥವಾ ಗೋದಿ ಹಾಗೂ ಪ್ರತಿ ಕುಟುಂಬಕ್ಕೆ 1 ಕೆಜಿ ಬೇಳೆಯನ್ನು ಉಚಿತವಾಗಿ ನೀಡಲಾಗಿತ್ತು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಇಂದಿನ ಪರಿಸ್ಥಿತಿಯನ್ನು ಮನಗಂಡು ಬಡವರಿಗೆ ಉಚಿತವಾಗಿ ಆಹಾರ ನೀಡುವ ಯೋಜನೆಯನ್ನು ಮುಂದಿನ 5 ತಿಂಗಳು ಅಂದರೆ ಜುಲೈ ತಿಂಗಳಿನಿಂದ ನವೆಂಬರ್ ಅಂತ್ಯದವರೆಗೂ ಮುಂದುವರೆಸಲು ಘೋಷಿಸಿದ್ದಾರೆ. ಈ ಯೋಜನೆಗೆ 90 ಸಾವಿರ ಕೋಟಿ ರೂ.ವೆಚ್ಚವಾಗಲಿದ್ದು, ಕಳೆದ ಮೂರು ತಿಂಗಳಲ್ಲಿ ಭರಿಸಿದ ವೆಚ್ಚ 60 ಸಾವಿರ ಕೋಟಿ ರೂ.ಸೇರಿ ಒಟ್ಟು 1.50 ಲಕ್ಷ ಕೋಟಿ ರೂ. ಗರೀಬ್ ಕಲ್ಯಾಣ್ ಅನ್ನ ಯೋಜನೆಗೆ ಒದಗಿಸಿರುವುದು ಅಭಿನಂದನಾರ್ಹ ಸಂಗತಿಯಾಗಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಒಂದು ದೇಶ ಒಂದು ಪಡಿತರ ಯೋಜನೆಯನ್ನು ಜಾರಿಗೆ ತಂದಿರುವುದು ಸಂತೋಷದಾಯಕವಾದ ಸಂಗತಿಯಾಗಿದೆ. ಸ್ವಾವಲಂಬಿ ಭಾರತ ನಿರ್ಮಾಣದ ಬಗ್ಗೆ ಮತ್ತೊಮ್ಮೆ ಪುನರುಚ್ಚರಿಸುತ್ತಾ, ದೇಶದಲ್ಲಿ ಹಿಂದುಳಿದವರ, ಬಡವರ ಸಬಲೀಕರಣಕ್ಕಾಗಿ ಆರ್ಥಿಕ ಚಟುವಟಿಕೆಗಳನ್ನು ಮುಂದುವರೆಸುವ ಘೋಷಣೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಂಕಷ್ಟದ ಸಮಯದಲ್ಲಿ ದೇಶಕ್ಕೆ ಅನ್ನ ನೀಡಿದ ರೈತರನ್ನು, ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸಿದ ತೆರಿಗೆದಾರರನ್ನು ಅಭಿನಂದಿಸಿದ ಪ್ರಧಾನಿ, ದೇಶದ ಎಲ್ಲರೂ ಆರೋಗ್ಯವಾಗಿರಬೇಕೆಂದು ಬಯಸಿ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ಹಾಗೂ ಮುಖಗವಸನ್ನು(ಮಾಸ್ಕ್) ತಪ್ಪದೇ ಬಳಸಲು ವಿನಂತಿಸಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News