ಸುವರ್ಣಸೌಧಕ್ಕೆ ಕಚೇರಿಗಳ ಸ್ಥಳಾಂತರಕ್ಕೆ ಆದೇಶ
ಬೆಂಗಳೂರು, ಜೂ, 30: ಬೆಳಗಾವಿಯಲ್ಲಿನ ಖಾಸಗಿ ಕಟ್ಟಡಗಳಲ್ಲಿ ಬಾಡಿಗೆಗೆ ಇರುವ ಸರಕಾರದ ವಿವಿಧ ಇಲಾಖೆಗಳ ಕಚೇರಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಬೆಳಗಾವಿ ಸುವರ್ಣಸೌಧಕ್ಕೆ ಸ್ಥಳಾಂತರಿಸಿ ರಾಜ್ಯ ಸರಕಾರ ಮಂಗಳವಾರ ಆದೇಶ ಹೊರಡಿಸಿದೆ.
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ, ಹಿರಿಯ ಭೂ ವಿಜ್ಞಾನಿಗಳ ಜಿಲ್ಲಾ ಅಂತರ್ಜಲ ಕಚೇರಿ, ಉಪನಿರ್ದೇಶಕರು ಪ್ರವಾಸೋದ್ಯಮ ಇಲಾಖೆ, ಸಹಾಯಕ ನಿರ್ದೇಶಕರು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ವಿಶೇಷ ಜಿಲ್ಲಾಧಿಕಾರಿ, ಭೂ ಸ್ವಾಧೀನ ಮತ್ತು ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಯೋಜನೆ.
ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಆಯುಕ್ತರು ಕರ್ನಾಟಕ ಮಾಹಿತಿ ಆಯೋಗ, ಕರ್ನಾಟಕ ನೀರಾವರಿ ನಿಗಮ ಸೇರಿದಂತೆ ಒಟ್ಟು 24 ಇಲಾಖೆಗಳು ಮತ್ತು ನಿಗಮ ಮಂಡಳಿಗಳ ಕಚೇರಿಗಳನ್ನು ಸ್ಥಳಾಂತರಿಸಲು ಸೂಚಿಸಲಾಗಿದೆ.
ಸ್ಥಳಾಂತರಗೊಳ್ಳಬೇಕಾದ ಕಚೇರಿಗಳ ಮುಖ್ಯಸ್ಥರು ಕಚೇರಿಗಳ ಸ್ಥಳಾಂತರಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಜುಲೈ ಮೊದಲ ವಾರದಲ್ಲಿ ಕಚೇರಿ ಸ್ಥಳಾಂತರ ಮಾಡತಕ್ಕದ್ದು. ಬೆಳಗಾವಿ ಜಿಲ್ಲಾಧಿಕಾರಿಗಳು ಕಚೇರಿಗಳ ಸ್ಥಳಾಂತರಕ್ಕೆ ಅಗತ್ಯ ಸಾರಿಗೆ ಮತ್ತು ಸಿಬ್ಬಂದಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಹೊಸ ಪೀಠೋಪಕರಣಗಳನ್ನು ಖರೀದಿಸುವಂತಿಲ್ಲ ಎಂದು ನಿರ್ದೇಶನ ನೀಡಲಾಗಿದೆ.