ತುರ್ತು ಪ್ರಕರಣಗಳಿಗೆ ಮಾತ್ರ ಅವಕಾಶ: ಹೈಕೋರ್ಟ್ ಸ್ಪಷ್ಟನೆ

Update: 2020-06-30 16:01 GMT

ಬೆಂಗಳೂರು, ಜೂ.30: ಕೊರೋನ ವೈರಸ್ ಹಿನ್ನೆಲೆಯಲ್ಲಿ ಅತಿ ತುರ್ತು ಪ್ರಕರಣಗಳನ್ನು ಮಾತ್ರ ವಿಚಾರಣೆಗೆ ನಿಗದಿಪಡಿಸುವುದಾಗಿ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಈ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ನೋಟಿಸ್ ಹೊರಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವಕೀಲರು ಹಾಗೂ ವ್ಯಾಜ್ಯದಾರರು ವಾಸ್ತವವಾಗಿ ತುರ್ತು ವಿಚಾರಣೆಗೆ ಅಗತ್ಯ ಇಲ್ಲದ ಪ್ರಕರಣಗಳನ್ನೂ ವಿಚಾರಣೆಗೆ ನಿಗದಿಪಡಿಸುವಂತೆ ಇ-ಮೇಲ್ ಮೂಲಕ ಮನವಿ ಸಲ್ಲಿಸುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ ಕೊರೋನ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. 
ಹೀಗಾಗಿ, ತಾತ್ಕಾಲಿಕ ಅವಧಿಗೆ ಈಗಾಗಲೇ ವಿಚಾರಣೆಗೆ ಅಂಗೀಕರಿಸುವ ಪ್ರಕರಣಗಳನ್ನು ತುರ್ತು ಕಾರಣ ಆಧರಿಸಿ ಅಂತಿಮ ವಿಚಾರಣೆಗೆ ನಿಗದಿಪಡಿಸಬೇಕೆಂಬ ಮನವಿಗಳನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಅಲ್ಲದೆ, ವಕೀಲರಾಗಲಿ ಅಥವಾ ವ್ಯಾಜ್ಯದಾರರಾಗಲಿ ತಮ್ಮ ಪ್ರಕರಣಗಳನ್ನು ತುರ್ತು ಕಾರಣ ನೀಡಿ ಅಂತಿಮ ವಿಚಾರಣೆಗೆ ನಿಗದಿಪಡಿಸಬೇಕೆಂದು ಇ-ಮೇಲ್ ಮೂಲಕ ಮನವಿ ಸಲ್ಲಿಸಬಾರದು ಎಂದು ರಿಜಿಸ್ಟ್ರಾರ್ ಜನರಲ್ ನೋಟಿಸ್‍ನಲ್ಲಿ ಮನವಿ ಮಾಡಿದ್ದಾರೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News