ದೇಶದಲ್ಲಿ ಅನ್ನಭಾಗ್ಯ ಯೋಜನೆ ಜಾರಿಯಾಗಲಿ: ಸಿದ್ದರಾಮಯ್ಯ ಒತ್ತಾಯ

Update: 2020-06-30 17:01 GMT

ಬೆಂಗಳೂರು, ಜೂ.30: ಕೊರೋನ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ನೋಡಿದರೆ, ಇದು 2-3 ತಿಂಗಳೊಳಗೆ ಕೊನೆಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ದೇಶದಲ್ಲಿ ಇನ್ನಷ್ಟು ಹಸಿವಿನ ಸಮಸ್ಯೆ ಉಲ್ಬಣಗೊಳ್ಳಲಿದ್ದು, ಈ ಕೂಡಲೇ ನಾವು ಜಾರಿಗೊಳಿಸಿದ್ದ ಅನ್ನಭಾಗ್ಯ ಯೋಜನೆಯನ್ನು ಇಡೀ ದೇಶದಲ್ಲಿ ಜಾರಿಗೆ ತರಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಮಂಗಳವಾರ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ನರೇಂದ್ರ ಮೋದಿ ಅವರ ಭಾಷಣಗಳು ಬಾಯಿ ಬಿಟ್ಟರೆ ಬಣ್ಣಗೇಡು ಎಂಬಂತಾಗಿದ್ದು, ಕೊರೋನ ನಿಯಂತ್ರಣಕ್ಕೆ ಸಿಗದೆ ಮಿತಿ ಮೀರಿ ಹೋಗುತ್ತಿದೆ. ಸೋಂಕಿನಿಂದ ತತ್ತರಿಸಿರುವ ಜನರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕು. ಆದರೆ, ಪ್ರಧಾನಿ ಅವರು ಯಾವುದೇ ಪೂರಕ ಯೋಜನೆಗಳನ್ನು ಜಾರಿಗೆ ತರದೆ ಜನರಲ್ಲಿನ ವಿಶ್ವಾಸವನ್ನು ಕುಗ್ಗಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಪೆಟ್ರೋಲ್-ಡೀಸೆಲ್ ಬೆಲೆ ಪ್ರತಿ ದಿನ ಹೆಚ್ಚಾಗುತ್ತಲೆಯಿದೆ. ಇದರಿಂದ, ಆಹಾರಧಾನ್ಯ, ತರಕಾರಿ ಸೇರಿ ದಿನಬಳಕೆ ವಸ್ತುಗಳ ಬೆಲೆಯಲ್ಲೂ ಏರಿಕೆ ಕಂಡಿದೆ. ಈ ತೈಲದ ಬೆಲೆ ಇನ್ನೇಷ್ಟು ದಿನ ಏರಿಕೆ ಕಾಣಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದರೆ, ನಮ್ಮ ಜನರು ಕೆಟ್ಟ ದಿನಗಳಿಗೆ ಹೊಂದಿಕೊಳ್ಳಲು ಸಿದ್ಧರಾಗುತ್ತಾರೆ ಎಂದ ಅವರು, ಕೊರೋನ ಚಿಕಿತ್ಸೆಗೆ ಜನರು ಹೆದರುವಂತಾಗಿದ್ದು, ಈ ಬಗ್ಗೆ ರಾಜ್ಯಗಳಿಗೆ ಕೇಂದ್ರ ನೆರವು ಘೋಷಿಸುವ ನಿರೀಕ್ಷೆವೂ ಹುಸಿಯಾಗಿದೆ ಎಂದು ಕಿಡಿಕಾರಿದ್ದಾರೆ.

ಪಿಎಂ ಕೇರ್ಸ್ ನಿಧಿಗೆ ನೆರವಾಗಲು ದೇಶದ ಜನರಲ್ಲಿ ಮನವಿ ಮಾಡಿಕೊಂಡಿದ್ದ ಪ್ರಧಾನಿ ಅವರು ಅದರ ಖರ್ಚು-ವೆಚ್ಚಗಳ ವಿವರಗಳನ್ನು ಇನ್ನೂ ನೀಡಿಲ್ಲ. ಈ ಎಲ್ಲ ವಿವರಗಳನ್ನು ದೇಶದ ಜನರ ಮುಂದಿಟ್ಟು ಪಾರದರ್ಶಕವಾಗಿ ನಡೆದುಕೊಳ್ಳುತ್ತಾರೆ ಎಂಬ ನಿರೀಕ್ಷೆಯೂ ಹುಸಿಯಾಗಿದ್ದು, ಇದಕ್ಕೆ ಚೀನಾದಿಂದಲೂ ದೇಣಿಗೆ ಪಡೆಯಲಾಗಿದೆ ಎಂಬ ಆರೋಪಗಳೂ ಕೇಳಿ ಬಂದಿದೆ. ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡಿಲ್ಲ ಎಂದು ಹೇಳಿದ್ದಾರೆ.

ಬಡವರಿಗೆ ಉಚಿತ ಆಹಾರ ಧಾನ್ಯ ನೀಡುವ ಗರೀಬ್ ಕಲ್ಯಾಣ ಯೋಜನೆ ನವೆಂಬರ್ ವರೆಗೆ ಮುಂದುವರಿಸಿರುವುದು ಸ್ವಾಗತಾರ್ಹ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಿಂಗಳ ಹಿಂದೆಯೇ ಈ ಬೇಡಿಕೆ ಇಟ್ಟಿದ್ದು, ಈ ಬೇಡಿಕೆಯನ್ನು ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News