ಅಚ್ಚಪ್ಪಗೆ ರಾಮಮೂರ್ತಿ ದತ್ತಿ ಪ್ರಶಸ್ತಿ ಪ್ರದಾನ

Update: 2020-06-30 18:09 GMT

ಬೆಂಗಳೂರು, ಜೂ.30: ಹಿರಿಯ ಕನ್ನಡಪರ ಹೋರಾಟಗಾರ ಬಿ.ಎನ್. ಅಚ್ಚಪ್ಪ ಅವರಿಗೆ 25 ಸಾವಿರ ನಗದು, ಪ್ರಶಸ್ತಿ ಫಲಕದೊಂದಿಗೆ ಕನ್ನಡ ಚಳವಳಿ ವೀರಸೇನಾನಿ ಮ. ರಾಮಮೂರ್ತಿ ದತ್ತಿ ಪ್ರಶಸ್ತಿಯನ್ನು ಕೃಷ್ಣರಾಜ ಪರಿಷನ್ಮಂದಿರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್ ಪ್ರದಾನ ಮಾಡಿದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಡಾ. ಮನು ಬಳಿಗಾರ, ಕನ್ನಡ ಸಾಹಿತ್ಯ ಪರಿಷತ್ತಿನ 106 ವರ್ಷಗಳಲ್ಲಿ ಅನೇಕ ದತ್ತಿ ಪ್ರಶಸ್ತಿಗಳನ್ನು ನೀಡಿದೆ. ಅವೆಲ್ಲವನ್ನು ಅತ್ಯಂತ ಅರ್ಹರಿಗೆ ನೀಡಲಾಗಿದೆ. ಪರಿಷತ್ತು ನೀಡುವ ಪ್ರಶಸ್ತಿಗಳಿಗೆ ಯಾರೂ ಲಾಬಿ ಮಾಡುವುದಿಲ್ಲ.
ಕಳೆದ 60 ವರ್ಷಗಳಿಂದ ಕನ್ನಡಪರ ಹೋರಾಟಗಳನ್ನು ನಡೆಸುತ್ತಿರುವ, ಅ.ನ.ಕೃ., ಮ. ರಾಮಮೂರ್ತಿ, ವಾಟಾಳ್ ನಾಗರಾಜ್ ಮುಂತಾದವರೊಡನೆ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಕನ್ನಡ ನಾಡು-ನುಡಿಗೆ ಸೇವೆ ಸಲ್ಲಿಸುತ್ತಿರುವ ಬಿ.ಎನ್. ಅಚ್ಚಪ್ಪ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿರುವುದು ಸಂತೋಷವಾಗಿದೆ. ಇಂಥ ದಿಟ್ಟ ಹೋರಾಟಗಾರರಿಗೆ ಗೌರವಿಸುವುದರ ಮೂಲಕ ನಾವು ನಮ್ಮ ಗೌರವವನ್ನು ಹೆಚ್ಚಿಸಿಕೊಂಡಂತಾಗಿದೆ. 87 ವರ್ಷ ವಯಸ್ಸಾಗಿರುವ ಅಚ್ಚಪ್ಪನವರು ಇನ್ನೂ ಹತ್ತಾರು ವರ್ಷ ಆರೋಗ್ಯದಿಂದ ಬಾಳಲಿ ಎಂದು ಹಾರೈಸುತ್ತೇನೆ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಿ.ಎನ್. ಅಚ್ಚಪ್ಪ, ಕನ್ನಡ ಚಳವಳಿ ಪ್ರಾರಂಭವಾದದ್ದು 1961-62ರಲ್ಲಿ. ಚಳವಳಿ ಪ್ರಾರಂಭವಾಗುವ ಕೆಲವು ವರ್ಷಗಳ ಮುಂಚೆಯೇ ಕಬ್ಬನಪೇಟೆಯಲ್ಲಿ ಕನ್ನಡ ಸಂಘ ಸ್ಥಾಪಿಸಿ ಹೋರಾಟ ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದರು.

ಕನ್ನಡಕ್ಕೆ ಬಾವುಟ ರೂಪಿಸಿಕೊಟ್ಟ ಮ. ರಾಮಮೂರ್ತಿ ಅವರೊಂದಿಗೆ ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದೇನೆ. ಅವರು ಇನ್ನೂ ಕೆಲವು ವರ್ಷಗಳ ಕಾಲ ಬದುಕಿದ್ದರೆ ಕನ್ನಡಕ್ಕೆ ಇನ್ನೂ ಹೆಚ್ಚಿನ ಅನುಕೂಲವಾಗುತ್ತಿತ್ತು ಎಂದರು.

ಕ.ಸಾ.ಪ. ಗೌರವ ಕಾರ್ಯದರ್ಶಿಗಳಾದ ವ.ಚ. ಚನ್ನೇಗೌಡ, ಡಾ. ರಾಜಶೇಖರ ಹತಗುಂದಿ, ರಾಜ್ಯ ಸಂಚಾಲಕರಾದ ಡಾ. ಪದ್ಮರಾಜ ದಂಡಾವತಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಾಮಾಜಿಕ ಅಂತರ ಕಾಯ್ದುಕೊಂಡು ನಡೆಸಿದ ಈ ಸರಳ ಸಮಾರಂಭದಲ್ಲಿ ಇಪ್ಪತ್ತು ಜನ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News