ಆಶಾ ಕಾರ್ಯಕರ್ತೆಯರಿಗೆ ಗೌರವಧನ ನೀಡದಷ್ಟು ದುಸ್ಥಿತಿ ರಾಜ್ಯ ಸರಕಾರಕ್ಕೆ ಬಂದಿದೆ: ಶಿವಾನಂದಸ್ವಾಮಿ ಟೀಕೆ

Update: 2020-06-30 18:27 GMT

ಚಿಕ್ಕಮಗಳೂರು, ಜೂ.30: ಕೊರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ನಿರಂತರವಾಗಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಪಾವತಿಸದಂತಹ ದುಸ್ಥಿತಿಯನ್ನು ರಾಜ್ಯ ಸರಕಾರ ಎದುರಿಸುತ್ತಿದೆ ಎಂದು ಅಜ್ಜಂಪುರ ತಾಲೂಕಿನ ಚಿಕ್ಕನಾವಂಗಲದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಟೀಕಿಸಿದ್ದಾರೆ.

ನಗರದಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಬೊಕ್ಕಸ ಖಾಲಿಯಾಗಿದೆ ಎಂಬುದಕ್ಕೆ ಆಶಾ ಕಾರ್ಯಕರ್ತೆಯರ ಗೌರವಧನವನ್ನು ಆಯಾಯ ಭಾಗದ ಸಹಕಾರಿ ಸಂಸ್ಥೆಗಳು ಕೊಡಬೇಕೆಂದು ಆದೇಶಿಸಿರುವುದು ಸಾಕ್ಷಿಯಾಗಿದೆ ಎಂದು ಹೇಳಿದರು.

ಕೋವಿಡ್-19ರ ಸಾಂಕ್ರಾಮಿಕ ರೋಗ ರಾಜ್ಯದಲ್ಲಿ ವ್ಯಾಪಿಸುತ್ತಿದ್ದಂತೆ ಅದರ ನಿರ್ವಹಣೆಗಾಗಿ ಪ್ರತೀ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಸ್ಥೆಗಳಿಂದ ತಲಾ ಹತ್ತುಸಾವಿರ ರೂ. ದೇಣಿಗೆ ಪಡೆದಿರುವ ಸರಕಾರ ಈಗ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಮೂರು¸ ಸಾವಿರ ರೂ. ಗೌರವಧನ ಪಾವತಿಸಬೇಕೆಂದು ಆದೇಶಿಸಿರುವುದನ್ನು ಖಂಡಿಸುವುದಾಗಿ ಅವರು ತಿಳಿಸಿದರು.

ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಸ್ಥೆಗಳು ಈಗಾಗಲೆ ಆರ್ಥಿಕ ದುಸ್ಥಿತಿಯಲ್ಲಿವೆ. ಅಂತಹ ಸಂದರ್ಭದಲ್ಲಿ ಕೋವಿಡ್ ನಿರ್ವಹಣೆಗೆಂದು ಹತ್ತು ಸಾವಿರ ರೂ. ದೇಣಿಗೆ ತೆಗೆದು ಕೊಂಡಿರುವ ರಾಜ್ಯ ಸರಕಾರ ಈಗ ಕನಿಷ್ಠ ಮೂವರು ಆಶಾಕಾರ್ಯಕರ್ತೆಯರಿಗೆ ಮಾಸಿಕ ಮೂರು ಸಾವಿರದಂತೆ ಗೌರವಧನ ಪಾವತಿಸಬೇಕೆಂದು ಆದೇಶ ನೀಡಿ ಸಹಕಾರಿ ಸಂಸ್ಥೆಗಳಿಗೆ ಬರೆ ಎಳೆದಿದೆ ಎಂದು ಹೇಳಿದರು.

ಸರಕಾರ ನೇರವಾಗಿ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಪಾವತಿಸಲು ಕ್ರಮ ವಹಿಸಬೇಕು. ಈಗ ಸಹಕಾರಿ ಸಂಸ್ಥೆಗಳಿಗೆ ನೀಡಿರುವ ಆದೇಶವನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸುವುದಾಗಿ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News