ಮೃತದೇಹಗಳನ್ನು ಎಸೆಯುವ ವಿಡಿಯೋ ವೈರಲ್: ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನೆಟ್ಟಿಗರು

Update: 2020-06-30 18:30 GMT

ಬಳ್ಳಾರಿ, ಜೂ. 30: ರಾಜ್ಯದಲ್ಲಿ ಪ್ರತಿದಿನ ಕೊರೋನ ಸೋಂಕು ಹಾಗೂ ಸೋಂಕಿನಿಂದ ಸಾವುಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದ್ದು, ಬಳ್ಳಾರಿಯಲ್ಲಿ ಜೂ.29ರಂದು ಕೊರೋನದಿಂದ ಮೃತಪಟ್ಟಿದ್ದ 9 ಮಂದಿಯ ಮೃತದೇಹಗಳನ್ನು ಗುಂಡಿಗಳಿಗೆ ಎಸೆಯುತ್ತಿರುವ ಭಯಾನಕ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. 

ಬಳ್ಳಾರಿಯಲ್ಲಿ ಜೂ.29ರಂದು 9 ಮಂದಿ ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟಿದ್ದರು. ಈ ಮೃತದೇಹಗಳ ಸಾಮೂಹಿಕ ಅಂತ್ಯ ಸಂಸ್ಕಾರವನ್ನು ನೆರವೇರಿಸುವಾಗ ಜಿಲ್ಲಾಡಳಿತ ಪರ ಸಿಬ್ಬಂದಿಗಳು ಎಲ್ಲ ಮೃತದೇಹಗಳನ್ನು ಎಸೆದಿದ್ದಾರೆ. ಈ ಎಲ್ಲ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಿಸಿರುವ ನೆಟ್ಟಿಗರು ಜಿಲ್ಲಾಡಳಿತ ಹಾಗೂ ಸರಕಾರದ ವಿರುದ್ಧ ಭಾರೀ ಆಕ್ರೋಶವನ್ನೆ ವ್ಯಕ್ತಪಡಿಸಿದ್ದಾರೆ.

ಇಂತಹ ಅಮಾನವೀಯ ವಿಡಿಯೋವನ್ನು ವೀಕ್ಷಿಸಿದ ನೆಟ್ಟಿಗರಲ್ಲಿ ಮನುಷ್ಯನ ಜೀವನ ಇಷ್ಟೇನಾ ಎನ್ನುವಂತಹ ಭಾವನೆ ಮೂಡಿದೆ. ತಕ್ಷಣ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.  

ಇದೇ ರೀತಿಯ ಘಟನೆಯೊಂದು ಬೇರೆ ರಾಜ್ಯದಲ್ಲಿ ನಡೆದಾಗ ಭಾರೀ ವೈರಲ್ ಆಗಿತ್ತು. ಸದ್ಯ ಇಂತಹ ಘಟನೆ ನಮ್ಮ ರಾಜ್ಯದಲ್ಲಿಯೇ ನಡೆದಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.  

ಬಳ್ಳಾರಿಯಲ್ಲಿ ಕೊರೋನದಿಂದ ಇಂದೂ 5 ಜನರು ಸಾವನ್ನಪ್ಪಿದ್ದಾರೆ. ನಿನ್ನೆ ಒಂದೇ ದಿನ 9 ಜನ ಸಂತ್ರಸ್ಥರು ಮೃತರಾಗಿದ್ದರು. ಬಳ್ಳಾರಿ ಇಲ್ಲಿಯವರೆಗೆ ಒಟ್ಟು 28 ಜನರು ಸಾವನ್ನಪ್ಪಿದ್ದಾರೆ. 

ತನಿಖೆಗೆ ಆದೇಶ
‘ಬಳ್ಳಾರಿಯಲ್ಲಿ ಅಮಾನವೀಯ ರೀತಿಯಲ್ಲಿ ಸಂತ್ರಸ್ಥರ ಶವ ಸಂಸ್ಕಾರ ನಡೆದಿರುವ ಪ್ರಕರಣದ ತನಿಖೆಯನ್ನು ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ್ ನೇತೃತ್ವದ ತಂಡಕ್ಕೆ ವಹಿಸಿ ಆದೇಶಿಸಲಾಗಿದೆ’
-ಎಸ್.ಎಸ್.ನಕುಲ್, ಬಳ್ಳಾರಿ ಜಿಲ್ಲಾಧಿಕಾರಿ

ಕ್ಷಮೆಯಾಚಿಸಿದ ಜಿಲ್ಲಾಧಿಕಾರಿ 
ಕೊರೋನ ಸೋಂಕಿನಿಂದ ಮೃತಪಟ್ಟ ಮೂವರ ಶವಗಳನ್ನು ಪಿಪಿಇ ಕಿಟ್ ಧರಿಸಿದ ಸಿಬ್ಬಂದಿ ವ್ಯಾನ್‍ನಿಂದ ಎಳೆದು ತಂದು ಒಂದೇ ಗುಂಡಿಗೆ ಎಸೆಯುವ 1 ನಿಮಿಷ 28 ಸೆಕೆಂಡಿನ ವೀಡಿಯೋ ಜಿಲ್ಲೆಗೆ ಸಂಬಂಧಿಸಿದ್ದು, ಈ ಘಟನೆಗಾಗಿ ಜಿಲ್ಲಾಡಳಿತವು ಮೃತರ ಸಂಬಂಧಿಕರಲ್ಲಿ ಹಾಗೂ ಜಿಲ್ಲೆಯ ಜನರಲ್ಲಿ ಬೇಷರತ್ ಆಗಿ ಕ್ಷಮೆ ಯಾಚಿಸುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News