'ಪಕ್ಷಾಂತರ ನಿಷೇಧ' ಕಾನೂನಿಗೆ ಸಕಾರಾತ್ಮಕ ಬದಲಾವಣೆಗೆ ಪ್ರಯತ್ನ: ಸ್ಪೀಕರ್

Update: 2020-06-30 18:32 GMT

ಬೆಂಗಳೂರು, ಜೂ. 30: ಪಕ್ಷಾಂತರ ನಿಷೇಧ ಕಾನೂನಿನ ಪ್ರಸ್ತಾಪಿತ ಬದಲಾವಣೆ ಹಾಗೂ ಮತ್ತಷ್ಟು ಬಿಗಿಗೊಳಿಸುವ ದೃಷ್ಟಿಯಿಂದ ವಿವಿಧ ಕ್ಷೇತ್ರದ ತಜ್ಞರುಗಳಿಂದ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ರಾಷ್ಟ್ರೀಯ ಸಮಿತಿಯ ಮುಂದೆ ಸಮರ್ಪಕವಾಗಿ ಮಂಡಿಸಿ ಕರ್ನಾಟಕದ ಪ್ರತಿನಿಧಿಯಾಗಿ ಪಕ್ಷಾಂತರ ನಿಷೇಧ ಕಾನೂನಿಗೆ ಸಕಾರಾತ್ಮಕ ಬದಲಾವಣೆಗಳನ್ನು ತರುವಲ್ಲಿ ಸಕಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಸಂವಿಧಾನದ ಹತ್ತನೆಯ ಅನುಸೂಚಿಯ ಅಡಿಯಲ್ಲಿ ಪೀಠಾಸೀನಾಧಿಕಾರಿಗಳ ಅಧಿಕಾರಗಳು ಹಾಗೂ ಅದರ ಅಡಿಯಲ್ಲಿ ರಚಿಸಲಾದ ನಿಯಮಗಳ ಮರು ಪರಿಶೀಲನೆ ಕುರಿತು ಲೋಕಸಭಾಧ್ಯಕ್ಷರಿಂದ ರಚಿಸಲ್ಪಟ್ಟ ಸಭಾಧ್ಯಕ್ಷರುಗಳ ಸಮಿತಿಯ ಸದಸ್ಯರು ಹಾಗೂ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹಿಂದಿನ ಅಡ್ವೊಕೇಟ್ ಜನರಲ್ ಆಗಿ ಕಾರ್ಯನಿರ್ವಹಿಸಿದ ಉದಯ ಹೊಳ್ಳ, ಅಶೋಕ್ ಹಾರ್ನಹಳ್ಳಿ, ಪ್ರೊ.ರವಿವರ್ಮಕುಮಾರ್ ಮತ್ತು ಮಧುಸೂಧನ್ ನಾಯಕ್ ಅವರುಗಳೊಂದಿಗೆ ಸದರಿ ವಿಷಯದ ಮೇಲೆ ಚರ್ಚಿಸಿ ಅವರುಗಳ ಅಭಿಪ್ರಾಯವನ್ನು ಪಡೆದಿರುತ್ತಾರೆ.

ಅಲ್ಲದೆ ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು ಹಾಗೂ ಕರ್ನಾಟಕ ಹಿಂದಿನ ಲೋಕಾಯುಕ್ತರಾದ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಮತ್ತು ಹಿಂದಿನ ಅಡ್ವೋಕೇಟ್ ಜನರಲ್ ಬಿ.ವಿ. ಆಚಾರ್ಯ ಅವರ ಲಿಖಿತ ಅಭಿಪ್ರಾಯವನ್ನು ಪಡೆದಿರುತ್ತಾರೆ. ಈ ದಿಸೆಯಲ್ಲಿ ಸಭಾಧ್ಯಕ್ಷರು ಇನ್ನೂ ಹಲವು ಕಾನೂನು ತಜ್ಞರ ಹಾಗೂ ಆಸಕ್ತ ಸಾರ್ವಜನಿಕರ ಅಭಿಪ್ರಾಯಗಳನ್ನು ಪಡೆದಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News