ಕುಟುಂಬ ಸದಸ್ಯರಲ್ಲಿ ಕೊರೋನ ಸೋಂಕು ದೃಢ: ಸ್ವತಃ ಕ್ವಾರಂಟೈನ್‍ಗೆ ಒಳಗಾದ ಹೈಕೋರ್ಟ್ ನ್ಯಾಯಮೂರ್ತಿಗಳು

Update: 2020-07-01 13:50 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.1: ಕರ್ನಾಟಕ ಹೈಕೋರ್ಟ್‍ನ ನ್ಯಾಯಮೂರ್ತಿ ಒಬ್ಬರ ಕುಟುಂಬ ಸದಸ್ಯರಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಹಾಗೂ ಮತ್ತೋರ್ವ ನ್ಯಾಯಮೂರ್ತಿ ಹೋಮ್ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.

ಹೈಕೋರ್ಟ್‍ನ ಹಿರಿಯ ನ್ಯಾಯಮೂರ್ತಿಯೋರ್ವರ ಕುಟುಂಬ ಸದಸ್ಯರು ತಪಾಸಣೆಗೆ ಒಳಪಟ್ಟ ವೇಳೆ ಸೋಂಕು ಇರುವುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಸೋಂಕಿತ ಕುಟುಂಬ ಸದಸ್ಯರನ್ನು ಹೊಂದಿರುವ ನ್ಯಾಯಮೂರ್ತಿ ಸ್ವತಃ ಹೋಮ್ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ಇದೇ ನ್ಯಾಯಮೂರ್ತಿ ಜೊತೆಗೆ ವಿಭಾಗೀಯ ಪೀಠದಲ್ಲಿ ಕಾರ್ಯ ನಿರ್ವಹಿಸಿದ್ದರಿಂದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರೂ ಸ್ವತಃ ಹೋಮ್ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.

ಕೊರೋನ ಪಾಸಿಟಿವ್ ಬಂದಿರುವ ಕುಟುಂಬಸ್ಥರನ್ನು ಒಳಗೊಂಡಿರುವ ನ್ಯಾಯಮೂರ್ತಿ ಪೀಠದ ಎದುರು ವಿಚಾರಣೆಗೆ ನಿಗದಿಯಾಗಿದ್ದ ಪ್ರಕರಣಗಳನ್ನು ಮತ್ತೋರ್ವ ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರ ಪೀಠಕ್ಕೆ ವರ್ಗಾವಣೆ ಮಾಡಿ ರಿಜಿಸ್ಟ್ರಾರ್ ಜನರಲ್ ನೋಟಿಸ್ ಹೊರಡಿಸಿದ್ದಾರೆ.

ಕೊರೋನ ಭೀತಿ ಹಿನ್ನೆಲೆಯಲ್ಲಿ ಜೂನ್ 30 ರಂದು ಇಡೀ ಹೈಕೋರ್ಟ್‍ಗೆ ರಜೆ ಘೋಷಿಸಿ ಎಲ್ಲ ನ್ಯಾಯಾಲಯ ಕಟ್ಟಡಗಳು ಮತ್ತು ಆವರಣಕ್ಕೆ ಸ್ಯಾನಿಟೈಸ್ ಮಾಡಲಾಗಿದೆ. ಹಾಗೆಯೇ ಹೈಕೋರ್ಟ್ ಬೆಂಗಳೂರು ಪ್ರಧಾನ ಪೀಠದಲ್ಲಿ ತಾತ್ಕಾಲಿಕವಾಗಿ ಫಿಸಿಕಲ್ ಕೋರ್ಟ್ ಕಲಾಪದ ಬದಲು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣಗಳ ವಿಚಾರಣೆ ನಡೆಸಲು ಸಿಜೆ ಆದೇಶದ ಮೇರೆಗೆ ನೋಟಿಸ್ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News