ಉಪಚುನಾವಣೆ ಘೋಷಣೆಗೆ ಮೊದಲೇ ಮತದಾರರಿಗೆ ಷರತ್ತು ಹಾಕಿದ ಸಚಿವ ರಮೇಶ್ ಜಾರಕಿಹೊಳಿ !

Update: 2020-07-01 13:00 GMT

ರಾಯಚೂರು, ಜು.1: `ನಮ್ಮ ಬೇಡಿಕೆ ಈಡೇರಿಸುವುದಾಗಿ ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಮತದಾರರು ಮಾತುಕೊಟ್ಟರೆ ಮಾತ್ರ ನಂದವಾಡಗಿ ಏತ ನೀರಾವರಿ ಯೋಜನೆ ಕಾಲುವೆ ಕಾಮಗಾರಿ ಪೂರ್ಣಗೊಳಿಸಿ ಕೊಡಲಾಗುವುದು' ಎಂದು ಉಪಚುನಾವಣೆ ಘೋಷಣೆಗೆ ಮೊದಲೇ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಮಸ್ಕಿ ಕ್ಷೇತ್ರದ ಮತದಾರರಿಗೆ ಷರತ್ತು ಹಾಕಿದ್ದಾರೆ.

ಬುಧವಾರ ಮಸ್ಕಿ ತಾಲೂಕಿನ ಬುದ್ದಿನ್ನಿ ಗ್ರಾಮದಲ್ಲಿ ಕೃಷ್ಣಾ ಜಲಭಾಗ್ಯ ನಿಗಮ ನಿಯಮಿತದ ನಂದವಾಡಗಿ ಏತ ನೀರಾವರಿ ಯೋಜನೆಯ ಹನಿ ನೀರಾವರಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಮಸ್ಕಿ ರೈತರು ಪ್ರತಾಪಗೌಡ ಪಾಟೀಲ್ ಅವರನ್ನು ಉಪ ಚುನಾವಣೆಯಲ್ಲಿ ಗೆಲ್ಲಿಸುವುದಾಗಿ ಮಾತು ಕೊಡಬೇಕು. ಆಗ ಮಾತ್ರ ಕಾಲುವೆ ಕಾಮಗಾರಿ ಪೂರ್ಣಗೊಳಿಸಿಕೊಡುತ್ತೇನೆ ಎಂದು ಹೇಳಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಆಡಳಿತಕ್ಕೆ ಬರಲು ಪ್ರತಾಪಗೌಡ ಪಾಟೀಲ್ ಅವರೂ ಕಾರಣಕರ್ತರಾಗಿದ್ದಾರೆ. ಹೀಗಾಗಿ ಅವರನ್ನು ಉಪ ಚುನಾವಣೆಯಲ್ಲಿ ಗೆಲ್ಲಿಸಿಕೊಡಬೇಕು ಎಂದು ಕೋರಿದ ಅವರು, ಮಸ್ಕಿ ಕ್ಷೇತ್ರಕ್ಕೆ ಶೀಘ್ರದಲ್ಲೆ ಉಪಚುನಾವಣೆ ನಡೆಯಲಿದೆ ಎಂದು ಇದೇ ವೇಳೆ ತಿಳಿಸಿದರು.

ತಾಂತ್ರಿಕ ಕಾರಣಗಳಿಂದ ಕಾಲುವೆ ಕಾಮಗಾರಿ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದೆ. ಏನೇ ಸಮಸ್ಯೆ ಇದ್ದರೂ ಕಾಲುವೆ ಕಾಮಗಾರಿ ಪೂರ್ಣಗೊಳಿಸುವುದು ನನ್ನ ಜವಾಬ್ದಾರಿ. ರೈತರು ಉಪಚುನಾವಣೆಯಲ್ಲಿ ಪ್ರತಾಪಗೌಡ ಪಾಟೀಲ್ ಅವರನ್ನು ಗೆಲ್ಲಿಸಿಕೊಡಬೇಕು ಎಂದ ಅವರು, ರಾಯಚೂರು, ಬಳ್ಳಾರಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ನೀರಾವರಿ ಯೋಜನೆಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಸದರಾದ ರಾಜಾ ಅಮರೇಶ್ವರ ನಾಯಕ, ಕರಡಿ ಸಂಗಣ್ಣ, ಶಾಸಕರಾದ ರಾಜುಗೌಡ, ಡಾ.ಶಿವರಾಜ್ ಪಾಟೀಲ್, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಸೇರಿದಂತೆ ನೀರಾವರಿ ಇಲಾಖೆ ಅಧಿಕಾರಿಗಳು, ಸ್ಥಳೀಯ ಬಿಜೆಪಿ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News