ಹೊರಗಿನಿಂದ ಬಂದವರು ಕಾನೂನು ಮೀರಿದರೆ ಕ್ರಮ: ಕೊಡಗು ಜಿಲ್ಲಾಧಿಕಾರಿ ಎಚ್ಚರಿಕೆ

Update: 2020-07-01 13:36 GMT

ಮಡಿಕೇರಿ, ಜು.1: ಜಿಲ್ಲೆಯಲ್ಲಿ ಕೊರೋನ ಸೋಂಕು ವ್ಯಾಪಿಸುವುದನ್ನು ತಡೆಯಲು ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶ್ರಮಿಸುತ್ತಿದ್ದರೂ ಹೊರದೇಶ ಮತ್ತು ಹೊರ ರಾಜ್ಯಗಳಿಂದ ಮರಳಿ ನಿಯಮ ಮೀರುತ್ತಿರುವ ಕೆಲವು ವ್ಯಕ್ತಿಗಳಿಂದ ಸಮಸ್ಯೆಗಳು ಉದ್ಭವಿಸುತ್ತಿದೆ. ಜಿಲ್ಲೆಗೆ ಮರಳಿದವರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸದೆ ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ. 

ಸರ್ಕಾರದ ಇತ್ತೀಚಿನ ನಿರ್ದೇಶನದ ಪ್ರಕಾರ, ಮಹಾರಾಷ್ಟ್ರ ಮತ್ತು ವಿದೇಶದಿಂದ ಮರಳಿದವರು ಕಡ್ಡಾಯವಾಗಿ 7 ದಿನಗಳ ಸಾಂಸ್ಥಿಕ ಸಂಪರ್ಕ ತಡೆಯಲ್ಲಿ ಮತ್ತು ನಂತರದ 7 ದಿನಗಳ ಗೃಹ ಸಂಪರ್ಕ ತಡೆಯಲ್ಲಿ ಇರಬೇಕಾಗಿದೆ. ಇತರೆ ರಾಜ್ಯಗಳಿಂದ ಮರಳಿದವರು 14 ದಿನಗಳ ಕಾಲ ಗೃಹ ಸಂಪರ್ಕ ತಡೆಯಲ್ಲಿರಬೇಕಿದೆ. ಈ ರೀತಿ ಮರಳಿದವರ ಪೈಕಿ ಅನೇಕ ಜವಾಬ್ದಾರಿಯುತ ವ್ಯಕ್ತಿಗಳು ನೇರವಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆ, ಸ್ಥಳೀಯ ಗ್ರಾಮ ಪಂಚಾಯತ್, ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರದ ಮುಂದೆ ವರದಿ ಮಾಡಿಕೊಳ್ಳುತ್ತಿದ್ದಾರೆ. ಆದರೂ ಇವರುಗಳ ಪೈಕಿ ಕೆಲವರು ಜಿಲ್ಲೆಗೆ ಪ್ರವೇಶಿಸಿದ್ದಲ್ಲದೆ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಾ, ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.  
ಸೋಂಕು ದೃಢಪಟ್ಟ ಪ್ರದೇಶವನ್ನು ಕಂಟೈನ್ಮೆಂಟ್ ವಲಯಗಳಾಗಿ ಪರಿವರ್ತಿಸಲಾಗಿದ್ದು, ನೆರೆ ಹೊರೆಯವರಿಗೆ ಸಹ ಇದರಿಂದ ತೊಂದರೆಯಾಗುತ್ತಿದೆ. ಜಿಲ್ಲಾಡಳಿತ ಇಂತಹ ಪ್ರಕರಣಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತದೆ. ಈ ರೀತಿ ಸರ್ಕಾರದ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ವರ್ತಿಸುವ ವ್ಯಕ್ತಿಗಳ ವಿರುದ್ದ ಪ್ರಕರಣ ದಾಖಲಿಸಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಅಥವಾ ಅವರುಗಳು ಆಗಮಿಸಿದ ವಿಚಾರವನ್ನು ಮರೆಮಾಚುತ್ತಿರುವ ಪ್ರಕರಣಗಳು ಯಾವುದೇ ಪ್ರದೇಶದಲ್ಲಿ ಕಂಡುಬಂದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಸಾರ್ವಜನಿಕರಲ್ಲಿ ಮನವಿ ಮಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News