ಚೀನಾದಿಂದ ಗಡಿ ಸಮೀಪ ಭಾರೀ ಶಸ್ತ್ರಾಸ್ತ್ರ ಟ್ಯಾಂಕರ್, ಫೈಟರ್ ವಿಮಾನಗಳ ನಿಯೋಜನೆ

Update: 2020-07-01 15:10 GMT
ಫೈಲ್ ಚಿತ್ರ

ಹೊಸದಿಲ್ಲಿ,ಜು.1: ಪೂರ್ವ ಲಡಾಖ್‌ನಲ್ಲಿ ಉಂಟಾಗಿರುವ ಸಂಘರ್ಷದ ಪರಿಸ್ಥಿತಿಯನ್ನು ಶಮನಗೊಳಿಸಲು ಹಾಗೂ ಗಡಿಗಳಿಂದ ಸೇನಾಪಡೆಗಳು ಹಿಂದೆ ಸರಿಯುವಂತೆ ಮಾಡುವ ಪ್ರಯತ್ನವಾಗಿ ಭಾರತ ಹಾಗೂ ಚೀನಿ ಮಿಲಿಟರಿ ಅಧಿಕಾರಿಗಳು ಮಾತುಕತೆ ನಡೆಸಿದ ಹೊರತಾಗಿಯೂ, ಚೀನಾವು ವಾಸ್ತವ ಗಡಿನಿಯಂತ್ರಣ ರೇಖೆ ಯುದ್ದಕ್ಕೂ ಇನ್ನೂ ತನ್ನ ಎರಡು ಸೇನಾ ಡಿವಿಜನ್ ಗಳನ್ನು ನಿಯೋಜಿಸಿರುವುದಾಗಿ ಭಾರತೀಯ ಬೇಹುಗಾರಿಕಾ ಮೂಲಗಳು ತಿಳಿಸಿವೆ.

  ಗಲ್ವಾನ್ ಕಣಿವೆಯಿಂದ ಸೇನಾಪಡೆಗಳನ್ನು ಹಿಂದೆ ಕರೆಸಿಕೊಳ್ಳಲು ದಕ್ಷಿಣ ಕ್ಸಿಜಿಯಾಂಗ್‌ನ ಮಿಲಿಟರಿ ವರಿಷ್ಠ ಮೇಜರ್ ಜನರಲ್ ಲಿಯು ಲಿನ್ ಅವರು ಭಾರತೀಯ ಸೇನಾಪಡೆಯ ಲೇಹ್‌ನ 15ನೇ ಕಾರ್ಪ್ಸ್ ಕಮಾಂಡರ್ ಜೊತೆ ಮಾತುಕತೆ ನಡೆಸಿದ್ದ ಸಂದರ್ಭ ಒಪ್ಪಿಕೊಂಡಿದ್ದರು. ಆದಾಗ್ಯೂ ಚೀನಾದ ಹೆಚ್ಚುವರಿ ಸೇನಾಪಡೆಗಳ ನಿಯೋಜನೆಯು ಬಿಕ್ಕಟ್ಟು ಇನ್ನಷ್ಟು ಉಲ್ಬಣಗೊಳ್ಳುವಂತೆ ಮಾಡುವ ಸಾಧ್ಯತೆಯಿದೆಯೆಂದು ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.

ಒಟ್ಟಾರೆಯಾಗಿ ಪೂರ್ವ ಲಡಾಕ್ ಪ್ರಾಂತದಲ್ಲಿ ಚೀನವು 24 ಸಾವಿರಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿತ್ತು. ಇದೀಗ ತನ್ನ ಸೇನಾಬಲಕ್ಕೆ ಚೀನಾವು 12 ಸಾವಿರ ಸೈನಿಕರ ಡಿವಿಜನ್‌ಗಳನ್ನು ಹೆಚ್ಚಿಗೆ ಸೇರಿಸಿದೆ. ಇಷ್ಟೇ ಅಲ್ಲದೆ ಗಡಿ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವ ಪ್ರಯತ್ನವಾಗಿ ಭಾರೀ ಗಾತ್ರದ ಬಂದೂಕುಗಳು, ಟ್ಯಾಂಕ್‌ ಗಳು ಹಾಗೂ ಫೈಟರ್ ವಿಮಾನವನ್ನು ಕೂಡಾ ಎಲ್‌ಎಸಿಯಲ್ಲಿ ಜಮಾವಣೆಗೊಳಿಸಿದೆ ಎಂದು ಬೇಹುಗಾರಿಕಾ ಮೂಲಗಳು ತಿಳಿಸಿವೆ.

 ಟಿಬೆಟ್ ಪ್ರಾಂತ್ಯದಲ್ಲಿ ಚೀನಾವು ಸಾಮಾನ್ಯವಾಗಿ ಸೇನಾಪಡೆಗಳ ಎರಡು ಡಿವಿಜನ್‌ ಗಳನ್ನಷ್ಟೇ ನಿಯೋಜಿಸಿರುತ್ತದೆ. ಆದರೆ ಈಗ ಅವು ತುಂಬಾ ದೂರದ ಪ್ರದೇಶಗಳಿಂದ ಇನ್ನೂ ಎರಡು ವಿಭಾಗಗಳನ್ನು ನಿಯೋಜಿಸಿದೆ. ಸೇನಾಪಡೆಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಬದ್ಧತೆಯನ್ನು ಚೀನಾ ಹೊಂದಿಲ್ಲವೆಂಬುದನ್ನು ಈ ಬೆಳವಣಿಗೆಗಳು ತೋರಿಸಿಕೊಡುತ್ತವೆ ಎಂದು ಮೂಲಗಳು ಹೇಳಿವೆ.

 ಗಡಿ ನಿಯಂತ್ರಣ ರೇಖೆಯುದ್ದಕ್ಕೂ ನಡೆಯುತ್ತಿರುವ ಬೆಳವಣಿಗೆಗಳನ್ನು ಭಾರತೀಯ ನಿಕಟವಾಗಿ ಗಮನಿಸುತ್ತಿದೆ ಹಾಗೂ ಅಲ್ಲಿ ಚೀನಾದ ಸೇನಾ ಬಲಕ್ಕೆ ಸರಿಸಮವಾಗಿ ತನ್ನ ಪಡೆಗಳನ್ನು ಕೂಡಾ ನಿಯೋಜಿಸಲು ನಿರ್ಧರಿಸಿದೆ.

 ಈ ಮಧ್ಯೆ ಗಡಿ ಬಿಕ್ಕಟ್ಟನ್ನು ಪರಿಹರಿಸಲು ಭಾರತ ಹಾಗೂ ಚೀನಾದ ಮಿಲಿಟರಿ ನಿಯೋಗಗಳ ಮಾತುಕತೆಯು ಪೂರ್ವ ಲಡಾಖ್‌ನಲ್ಲಿ ಮಂಗಳವಾರ ನಡೆಯಿತು. ಬೆಳಗ್ಗೆ 10:30ರ ವೇಳೆಗೆ ಆರಂಭಗೊಂಡ ಮಾತುಕತೆಯು ಮಂಗಳವಾರ ರಾತ್ರಿ 11  ಗಂಟೆಯವರೆಗೂ ನಡೆಯಿತೆಂದು ಮೂಲಗಳು ತಿಳಿಸಿವೆ.

 ಇತ್ತಂಡಗಳ ನಡುವೆ ನಡೆದ ಮೂರನೆ ಮಾತುಕತೆ ಇದಾಗಿದೆ. ಇದಕ್ಕೂ ಮುನ್ನ ಜೂನ್ ಆ ಹಾಗೂ ಜೂನ್ 22ರಂದು ನಡೆಯಿತು.

ಪೂರ್ವ ಲಡಾಖ್‌ ನ ಪಾಂಗೊಂಗ್ ತ್ಸೊ ಪ್ರದೇಶದಿಂದ ಹಿಂದೆ ಸರಿಯಲು ಚೀನಾ ಸೇನೆ ಒಪ್ಪಿಕೊಂಡಿತ್ತಾದರೂ, ನುಡಿದಂತೆ ಅದು ನಡೆದುಕೊಳ್ಳುತ್ತಿಲ್ಲ. ವಾಸ್ತವ ಗಡಿ ನಿಯಂತ್ರಣ ರೇಖೆಯ ಫಿಂಗರ್ 8 ಗಸ್ತು ಠಾಣೆಯವರೆಗೆ ಭಾರತ ತನ್ನ ಹಕ್ಕನ್ನು ಸ್ಥಾಪಿಸಿದೆ. ಆದರೆ ಚೀನಾ ಪಡೆಗಳು ಫಿಂಗರ್ 4 ಹಾಗೂ ಫಿಂಗರ್ 5ರ ಗಸ್ತು ಠಾಣೆಗಳ ನಡುವಿನ ಪ್ರದೇಶವನ್ನು ಅತಿಕ್ರಮಿಸಿಕೊಂಡಿದೆ. ಡೆಪ್ಸಾಂಗ್ ಹಾಗೂ ಡೆಮ್‌ ಚೊಕ್ ಪ್ರದೇಶದ ನಡುವೆ ಉಭಯದೇಶಗಳ ನಡುವೆ ಭಿನ್ನಮತ ಉಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News