ತುಮಕೂರು: ಎಸಿಬಿ ದಾಳಿ, ನಕಲಿ ತಹಶೀಲ್ದಾರ್ ಸೇರಿ ಇಬ್ಬರ ಬಂಧನ

Update: 2020-07-01 16:32 GMT

ತುಮಕೂರು,ಜು.1.ತುಮಕೂರು ತಹಶೀಲ್ದಾರ್ ಮೋಹನ್ ಅವರ ಹೆಸರಿನಲ್ಲಿ ರೈತರೊಬ್ಬರಿಂದ 1.20 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇರಿಸಿದ್ದ ಇಬ್ಬರು ಬ್ರೋಕರ್ ಗಳನ್ನು ಎಸಿಬಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ರುದ್ರಸ್ವಾಮಿ ಮತ್ತು ಹರಳೂರು ಗ್ರಾಮದ ಶಿವಕುಮಾರ್ ಬಂಧಿತರು.

ತುಮಕೂರು ತಾಲ್ಲೂಕಿನ ಕೋರ ಹೋಬಳಿ, ಕರೀಕೆರೆ ಗ್ರಾಮದ ವಾಸಿ ರಂಗನಾಥ್ ಎಂಬುವರ ಜಮೀನಿನ 1-5 ನಮೂನೆ ಭರ್ತಿ ಮಾಡಿ ಕೊಡಲು ಈ ಇಬ್ಬರು ಆರೋಪಿಗಳು ಹಣಕ್ಕಾಗಿ ಬೇಡಿಕೆ ಇರಿಸಿದ್ದರು.

ಆರೋಪಿ ಶಿವಕುಮಾರ್ ಎಂಬಾತ ತಾನೇ ತುಮಕೂರು ತಹಶೀಲ್ದಾರ್ ಮೋಹನ್ ಎಂದು ರಂಗನಾಥ್ ಅವರ ಜೊತೆಯಲ್ಲಿ ಮೊಬೈಲ್ ನಲ್ಲಿ ಮಾತನಾಡಿ, 1-5 ನಮೂನೆ ಭರ್ತಿ ಮಾಡಲು ಎಕರೆಗೆ 1.20 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇರಿಸಿದ್ದನು. ಈ ಬಗ್ಗೆ ರಂಗನಾಥ್ ಎಸಿಬಿಗೆ ದೂರು ಸಲ್ಲಿಸಿದ್ದರು.

ಜುಲೈ 1 ರಂದು ಬೆಳಗ್ಗೆ 8.30 ರ ಸಮಯದಲ್ಲಿ ನಗರದ ಎಸ್.ಎಸ್ ಪುರಂ ಕ್ರಾಸ್, ಉಪ್ಪಾರಹಳ್ಳಿ ಫ್ಲೈ ಓವರ್ ಬಳಿ ಆರೋಪಿ ರುದ್ರಸ್ವಾಮಿ, ಹಣವನ್ನು ಸ್ವೀಕರಿಸುತ್ತಿದ್ದಾಗ ಎಸಿಬಿ ಡಿ.ಎಸ್.ಪಿ ಉಮಾಶಂಕರ್ ಬಿ., ನೇತೃತ್ವದಲ್ಲಿ ಹಣದ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ, ಹರಳೂರು ಗ್ರಾಮದ ಬ್ರೋಕರ್ ಶಿವಕುಮಾರ್ ನನ್ನು ಕೂಡ ಬಂಧಿಸಲಾಗಿದೆ‌.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News